ಸಾರಾಂಶ
- ಶಾಸಕ ಎಚ್ ಕೆ. ಸುರೇಶ್‌ಗೆ ಮನವಿ - ಕಾಡಾನೆ ಪ್ರದೇಶಗಳಲ್ಲಿ ಗಣಿಗಾರಿಕೆ ನಿಲ್ಲಿಸಿರುವ ಅಸ್ಸಾಂ
- ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡುಗಳಲ್ಲಿ ನಿಲ್ಲಿಸಲು ಒತ್ತಾಯಕನ್ನಡಪ್ರಭ ವಾರ್ತೆ ಆಲೂರುಅಸ್ಸಾಂ ರಾಜ್ಯದಲ್ಲಿ ಕಾಡಾನೆ ಇರುವ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆಯನ್ನ ನಿಷೇಧ ಮಾಡಿರುವ ಮಾದರಿಯಲ್ಲಿ, ಕರ್ನಾಟಕ ಸರ್ಕಾರವು ಹಾಸನ ಜಿಲ್ಲೆ ಬೇಲೂರು, ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲೂಕುಗಳಲ್ಲಿ ಕಲ್ಲು ಗಣಿಗಾರಿಕೆಯನ್ನು ನಿಷೇಧ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಬೇಲೂರು ಶಾಸಕ ಎಚ್ ಕೆ. ಸುರೇಶ್ ಅವರಿಗೆ ಆಲೂರಿನ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತಕುಮಾರ್ ವಿಧಾನಸೌಧದ ಆವರಣದಲ್ಲಿ ಮನವಿ ಸಲ್ಲಿಸಿದ್ದಾರೆ.
ಅಸ್ಸಾಂ ರಾಜ್ಯವು ದೇಶದಲ್ಲಿ ಆನೆಗಳಿರುವಂತಹ ಎರಡನೆ ರಾಜ್ಯವಾಗಿದೆ. ಅಸ್ಸಾಂ ರಾಜ್ಯದಲ್ಲಿ ಮಾನವ ಮತ್ತು ಕಾಡಾನೆ ಸಂಘರ್ಷ ವ್ಯಾಪಕವಾಗಿ ದಾಳಿಗೆ ಒಳಗಾಗುತ್ತಿದ್ದನ್ನು ಕಂಡುಬಂದು, ಅಸ್ಸಾಂ ಸರ್ಕಾರ ಕಾಡಾನೆ ಇರುವ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆಯನ್ನ ಸಂಪೂರ್ಣವಾಗಿ ನಿಷೇಧ ಮಾಡಿದೆ. ಇದರಿಂದ ಆನೆಗಳಿಗೆ ಮಾನಸಿಕವಾಗಿ ಭಯಭೀತರಾಗುವಂತಹ ಶಬ್ದಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.ಕರ್ನಾಟಕ ರಾಜ್ಯ ಆನೆಗಳಿರುವ ಮೊದಲ ಸ್ಥಾನದಲ್ಲಿರುವ ರಾಜ್ಯ ಎಂದು ಗುರುತಿಸಿಕೊಂಡಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗವಾದ ಬೇಲೂರು, ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲೂಕುಗಳಲ್ಲಿ ಕಳೆದ ಐದು ದಶಕಗಳಿಂದ ಆನೆಗಳು ಮತ್ತು ಮಾನವನ ನಡುವೆ ಸಂಘರ್ಷ ಏರ್ಪಡುತ್ತಿದೆ. ಆದ್ದರಿಂದ ತಾವುಗಳು ಅಸ್ಸಾಂ ರಾಜ್ಯದ ಮಾದರಿಯಂತೆ ಕರ್ನಾಟಕ ಸರ್ಕಾರ ಕೂಡ ಕಲ್ಲು ಗಣಿಗಾರಿಕೆಯನ್ನ ನಿಷೇಧ ಮಾಡಬೇಕೆಂದು ಸದನದಲ್ಲಿ ಗಮನ ಸೆಳೆಯಬೇಕೆಂದು ಮನವಿಯಲ್ಲಿ ಕೋರಿದ್ದಾರೆ.