ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಮತ್ತು ನಾವು ಪ್ರತಿಷ್ಠಾನ ಸಂಸ್ಥೆ ಸಹ ಭಾಗಿತ್ವದಲ್ಲಿ ಗ್ರಾ.ಪಂ. ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯನ್ನು ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಮತ್ತು ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಯಶ್ವಿನಿ ಜಂಟಿ ಅಧ್ಯಕ್ಷತೆಯಲ್ಲಿ ಆಲೂರುಸಿದ್ದಾಪುರ ವಿಜಯ ಯುವಕ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.ಗ್ರಾ.ಪಂ.ಗೆ ಒಳಪಟ್ಟ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು, ಗ್ರಾಮಸಭೆಯಲ್ಲಿ ತಮ್ಮ ಶಾಲೆಗಳಲ್ಲಿರುವ ಕುಂದು ಕೊರತೆ, ಸಮಸ್ಯೆಗಳು ಸೇರಿದಂತೆ ತಮ್ಮ ಶಾಲೆಗೆ ಅಗತ್ಯ ಇರುವ ಸೌಲಭ್ಯಗಳ ಕುರಿತಾದ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.
ತಮ್ಮ ಶಾಲೆಯಲ್ಲಿ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವುದು, ಶಾಲೆಯಲ್ಲಿ ಶೌಚಾಲಯ ಇದ್ದರೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದೆ ಇರುವುದು, ಶಾಲೆಯ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸಿದ್ದರೂ ಶಾಲಾ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸದಿರುವುದ್ದರಿಂದ ಜಾನುವಾರುಗಳು ಆಟದ ಮೈದಾನದಲ್ಲಿ ಓಡಾಡುತ್ತವೆ, ಇದರಿಂದ ಸಮಸ್ಯೆ ಆಗುತ್ತಿರುವುದು, ಶಾಲಾ ಆಟದ ಮೈದಾನ ಸಮತಟ್ಟು ಇಲ್ಲದ ಕಾರಣದಿಂದ ಮಳೆಗಾಲದಲ್ಲಿ ಆಟದ ಮೈದಾನದಲ್ಲಿ ನೀರು ತುಂಬಿಕೊಳ್ಳುವುದು, ಶಾಲೆಗೆ ಕ್ರೀಡಾ ಸಾಮಾಗ್ರಿಗಳು ಇಲ್ಲಿದಿರುವುದು, ದೂರದ ಊರಿನಿಂದ ಮಕ್ಕಳು ಶಾಲೆಗೆ ಬರುತ್ತಾರೆ, ಆದರೆ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದಿರುವುದ್ದರಿಂದ ಶಾಲಾ ಮಕ್ಕಳಿಗೆ ಶಾಲೆಗೆ ಬರಲು ಸಮಸ್ಯೆಯಾಗುತ್ತಿದೆ ಎಮದು ಮಕ್ಕಳು ಸಮಸ್ಯೆಗಳನ್ನು ಹೇಳಿದರು.ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಇದ್ದರೂ ವಿಜ್ಞಾನ ಪ್ರಾಯೋಗಿಕ ಪರಿಕರಗಳು ನಾದುರಸ್ತಿಗೊಂಡಿರುವುದು, ಶಾಲೆಗೆ ಕುಡಿಯುವ ನೀರಿನ ಸಮಸ್ಯೆ, ಶಾಲೆಗೆ ಸಿಸಿ ಕ್ಯಾಮಾರ ಅಳವಡಿಸುವುದು, ಶಾಲಾ ಮಕ್ಕಳಿಗೆ ಸೈಕಲ್ ವ್ಯವಸ್ಥೆ ಒದಗಿಸುವುದು ಇನ್ನು ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಭೆಯ ಮುಂದೆ ಬಿಚ್ಚಿಟ್ಟರು.
ಚಿಕ್ಕ ಕಣಗಾಲು ಶಾಲೆಯ ವಿದ್ಯಾರ್ಥಿಯೊಬ್ಬ, ನಮ್ಮ ಶಾಲೆಯಲ್ಲಿ 15 ಮಕ್ಕಳು ವ್ಯಾಸಂಗ ಮಾಡುತ್ತಿದ್ದೇವೆ, ಆದರೆ ಶಾಲೆಯಲ್ಲಿ ಹಾಜರಾತಿ ಪ್ರಮಾಣ ಕಡಿಮೆ ಇದ್ದ ಮಾತ್ರಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನಿಲ್ಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಹಾಜರಾತಿ ಪ್ರಮಾಣ ಕಡಿಮೆ ಇರುವ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ಕೂಡಾ ಇದನ್ನೇ ಪ್ರಶ್ನಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ ಅಂಕನಹಳ್ಳಿ ಶಾಲಾ ವಿದ್ಯಾರ್ಥಿನಿ ಯಶ್ವಿನಿ, ನಮ್ಮ ಶಾಲೆಯ ಮುಂಭಾಗದ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದ್ದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತದೆ. ಇದರಿಂದ ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗುತ್ತಿದೆ, ಅಂಕನಹಳ್ಳಿ ಮಾರ್ಗದಲ್ಲಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಕುರಿತು ಗಮನ ಸೆಳೆದರು.
ಸಭೆಯಲ್ಲಿ ನಾವು ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕಿ ಸುಮನ ಮ್ಯಾಥ್ಯೂ ಮಾಹಿತಿ ನೀಡಿ, ಸರ್ಕಾರ 2006ರಲ್ಲಿ ಮಕ್ಕಳ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಶೂನ್ಯದಿಂದ 18 ವರ್ಷದ ವರೆಗೆ ಮಕ್ಕಳು ಎಲ್ಲ ರೀತಿಯ ಹಕ್ಕುಗಳಿಗೆ ಭಾಜನರಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳನ್ನು ಮಕ್ಕಳಿಗೆ ನೀಡುವುದು ಸರ್ಕಾರ, ಸಂಬಂಧಿಸಿದ ಇಲಾಖೆಯ ಜವಾಬ್ದಾರಿಯಾಗುತ್ತದೆ ಎಂದರು.ಗ್ರಾಮೀಣ ಪ್ರದೇಶದಲ್ಲಿ ಶೇ.48ರಷ್ಟು ಮಕ್ಕಳು ಇರುವುದರಿಂದ ಮಕ್ಕಳಿಗೆ ಮೂಲಸೌಕರ್ಯಗಳ ಬಗ್ಗೆ, ಮಕ್ಕಳ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವ ಸಲುವಾಗಿಯೇ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಗುತ್ತದೆ. ಈ ದಿಸೆಯಲ್ಲಿ ಅಧಿಕಾರಿಗಳು ಮಕ್ಕಳ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕಿದೆ ಎಂದು ತಿಳಿಸಿದರು.
ಮಕ್ಕಳ ಆರೋಗ್ಯ ಸೇವೆ ಕುರಿತು ಆಲೂರಿಸಿದ್ದಾಪುರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್, ಮಕ್ಕಳ ರಕ್ಷಣೆ ಕುರಿತು ಶನಿವಾರಸಂತೆ ಎಎಸ್‍ಐ ಜಗದೀಶ್, ಶಿಕ್ಷಣ ಹಕ್ಕು ಕರಿತು ಗೋಣಿಮರೂರು ಸಿಆರ್‌ಪಿ ಆಶಾ, ಗ್ರಾ.ಪಂ. ಮಹತ್ವ ಕುರಿತು ಆಲೂರುಸಿದ್ದಾಪುರ ಪಿಡಿಒ ಹರೀಶ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು, ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳಿಂದ ವ್ಯಕ್ತವಾದ ಬೇಡಿಕೆ ಮತ್ತು ಸಮಸ್ಯೆಗಳನ್ನು ಹಂತಹಂತವಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರು, ಪ್ರೌಢಶಾಲಾ ಮುಖ್ಯಶಿಕ್ಷಕ ಸೋಮಶೇಖರ್, ನಾವು ಪ್ರತಿಷ್ಠಾನ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಗೌತಮ್ ಕಿರಗಂದೂರು, ಸಂಸ್ಥೆಯ ಕಾರ್ಯಕರ್ತೆ ಬಿ.ಕೆ.ಕುಮಾರಿ, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಂಜೀವಿನಿ ತಾಲೂಕು ಒಕ್ಕೂಟ ಅಧ್ಯಕ್ಷೆ ಜಾನಕಿ ಗಂಗಾಧರ್ ಮುಂತಾದವರಿದ್ದರು.