ಸಾರಾಂಶ
ಆಲೂರುಸಿದ್ದಾಪುರ ಪ.ಪೂ. ಕಾಲೇಜಿನ ಗ್ರಾಮೀಣ ಕ್ರೀಡಾಂಗಣದಲ್ಲಿ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ ಭಾನುವಾರ ನಡೆಯಿತು. ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಉದಯಕುಮಾರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕೊಡಗು ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಶನ್ ಆಲೂರುಸಿದ್ದಾಪುರ ಹಾಗೂ ವಿವಿಧ ಸಂಘ, ಸಂಸ್ಥೆಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ಆಲೂರುಸಿದ್ದಾಪುರ ಪ.ಪೂ. ಕಾಲೇಜಿನ ಗ್ರಾಮೀಣ ಕ್ರೀಡಾಂಗಣದಲ್ಲಿ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ ಭಾನುವಾರ ನಡೆಯಿತು.ಪಂದ್ಯಾವಳಿಯನ್ನು ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಉದಯಕುಮಾರ್ ಉದ್ಘಾಟಿಸಿ, ಹ್ಯಾಂಡ್ ಬಾಲ್ ನಂತಹ ಹೊಸದಾದ ಕ್ರೀಡೆಯನ್ನು ಕ್ರೀಡಾಪ್ರೇಮಿಗಳಿಗೆ ಪರಿಚಯಿಸಿ ಜಿಲ್ಲಾಮಟ್ಟದ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವ ಆಯೋಜಕರ ಕಾರ್ಯ ಶ್ಲಾಘನೀಯ ಎಂದರು.ಜಿಲ್ಲಾ ಹ್ಯಾಂಡ್ ಬಾಲ್ ಅಸೋಶಿಯೇಶನ್ ಕಾರ್ಯದರ್ಶಿ ಹಾಗೂ ಸದರಿ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸಹನ ಪ್ರಾಸ್ತಾವಿಕವಾಗಿ ಮಾತನಾಡಿ, ಹ್ಯಾಂಡ್ ಬಾಲ್ ಕ್ರೀಡೆಯನ್ನು ಜಿಲ್ಲೆಗೆ ಪರಿಚಯಿಸಿ ಕೊಡುವ ಉದ್ದೇಶದಿಂದ ಒಂದು ವರ್ಷದ ಹಿಂದೆ ಅಸೋಸಿಯೇಶನ್ ರಚಿಸಲಾಗಿದ್ದು, ಈ ಮುಖೇನ ಪ್ರಥಮ ಬಾರಿಗೆ 17 ವರ್ಷದ ಬಾಲಕ ಮತ್ತು ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಆಲೂರುಸಿದ್ದಾಪುರ ಅಸೋಶಿಯೇಶನ್ ಕಡೆಯಿಂದ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಬಾಲಕ ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾವಳಿ ಪ್ರತಿವರ್ಷ ನಡೆಯುತ್ತದೆ ಎಂದರು.ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಿಂದ ಹ್ಯಾಂಡ್ ಬಾಲ್ ಉತ್ತಮ ತಂಡವನ್ನು ತಯಾರು ಮಾಡಿ ರಾಜ್ಯಮಟ್ಟದ ಪಂದ್ಯಾವಳಿಗೆ ಕಳುಹಿಸಿಕೊಡುವ ಉದ್ದೇಶದಿಂದ ಹ್ಯಾಂಡ್ ಬಾಲ್ ಕ್ರೀಡೆಯ ಹೆಸರಿನಲ್ಲಿ ಅಸೋಸಿಯೇಶನ್ ರಚಿಸಲಾಗಿದೆ ಎಂದು ತಿಳಿಸಿದರು.ಪ.ಪೂ. ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಪ್ರಥಮ ಬಾರಿಗೆ ಆಲೂರುಸಿದ್ದಾಪುರದಲ್ಲಿ ಬಾಲಕ, ಬಾಲಕಿಯರ ಹ್ಯಾಂಡ್ ಬಾಲ್ ಜಿಲ್ಲಾಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದರು.ಆಲೂರುಸಿದ್ದಾಪುರ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಸೋಮಶೇಖರ್ ಮಾತನಾಡಿದರು.
ಜಿಲ್ಲಾ ಹ್ಯಾಂಡ್ ಬಾಲ್ ಅಸೋಶಿಯೇಶನ್ ಅಲೂರುಸಿದ್ದಾಪುರ ಅಧ್ಯಕ್ಷ ಮತ್ತು ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಕೆ.ಶಿವಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕಿ ಎ.ಸಿ.ಶ್ರುತಿ, ಗ್ರಾ.ಪಂ. ಸದಸ್ಯರಾದ ಮಲ್ಲಪ್ಪ, ಪರ್ಲಕೋಟಿ ಸತೀಶ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಶಿಕ್ಷಕರಾದ ಮಂಜಪ್ಪ, ಜವರಯ್ಯ, ಭಾಗ್ಯಜ್ಯೋತಿ, ಜಯರಾಮ್, ವಿದ್ಯಾ, ರಘು, ಪ್ರಮುಖರಾದ ವೀರೇಶ್, ತ್ಯಾಗರಾಜ್ ಮುಂತಾದವರಿದ್ದರು.