ಆಳ್ವಾಸ್‌ ಕಾಲೇಜ್‌: ನಿರ್ವಹಣಾ ಶಾಸ್ತ್ರ ವಿಭಾಗ ಸ್ಪೆಕ್ಟಾಕಲ್‌ ವೇದಿಕೆ ಚಟುವಟಿಕೆ ಉದ್ಘಾಟನೆ

| Published : Jul 03 2025, 11:51 PM IST

ಆಳ್ವಾಸ್‌ ಕಾಲೇಜ್‌: ನಿರ್ವಹಣಾ ಶಾಸ್ತ್ರ ವಿಭಾಗ ಸ್ಪೆಕ್ಟಾಕಲ್‌ ವೇದಿಕೆ ಚಟುವಟಿಕೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ನಿರ್ವಹಣಾಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬುಧವಾರ ವಿದ್ಯಾಗಿರಿ ಆವರಣದಲ್ಲಿ ‘ಸ್ಪೆಕ್ಟಾಕಲ್’ ವೇದಿಕೆಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ನಿರ್ವಹಣಾಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬುಧವಾರ ವಿದ್ಯಾಗಿರಿ ಆವರಣದಲ್ಲಿ ‘ಸ್ಪೆಕ್ಟಾಕಲ್’ ವೇದಿಕೆಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿಯ ಸಿಇಒ ಕಾರ್ತಿಕ್ ಶೆಟ್ಟಿ, ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ವಲಯವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಕರವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ಕ್ಷೇತದಲ್ಲಿರುವ ಅವಕಾಶಗಳನ್ನು ಅನ್ವೇಷಿಸಲು ನಾವು ಸೋತಿದ್ದೇವೆ ಎಂದರು. ನವಮಂಗಳೂರು ಬಂದರಿನ ಜೆಎಸ್‌ಡಬ್ಲ್ಯೂ ಕಂಟೇನರ್ ಟರ್ಮಿನಲ್‌ನೊಂದಿಗೆ ಅವರ ಅನುಭವ ಹಂಚಿಕೊಂಡ ಅವರು, ಸ್ಥಳೀಯ ಕೌಶಲ್ಯವಂತ ಪ್ರತಿಭೆಗಳ ಕೊರತೆಯಿಂದ ಅನಿವಾರ್ಯವಾಗಿ ಗುಜರಾತ್ ಮತ್ತು ತಮಿಳುನಾಡಿನ ಸಿಬ್ಬಂದಿಯನ್ನು ನೇಮಿಸಬೇಕಾಯಿತು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನವೀನ ಉದ್ಯಮಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ಲಾಜಿಸ್ಟಿಕ್ಸ್ ನಂತಹ ಉದಯೋನ್ಮುಖ ವಲಯಗಳನ್ನು ಅನ್ವೇಷಿಸಬೇಕು, ವಿಶೇಷವಾಗಿ ಕೃತಕ ಬುದ್ಧಿಮತ್ತೆ ಈ ಉದ್ಯಮವನ್ನು ಹಿಂದೆಂದಿಗಿಂತಲೂ ವೇಗವಾಗಿ ಮರುರೂಪಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಕುರಿಯನ್, ಸ್ಪೆಕ್ಟಾಕಲ್ ವೇದಿಕೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಸಾಮರ್ಥ್ಯಗಳನ್ನು ವಿಶ್ಲೇಷಿಸಿ ಪ್ರೊಫೈಲ್ ತಯಾರಿಸುವ ಕೆಲಸವಾಗಬೇಕು. ಇದರಿಂದ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಬಳಸಿಕೊಂಡು ಹೊಸ ಆಲೋಚನೆಗಳನ್ನು ರೂಪಿಸಬೇಕು. ಕಲಿಕೆಯ ಪ್ರತಿ ಕ್ಷಣವನ್ನು ಪಾಠವಾಗಿ ಪರಿವರ್ತಿಸುವ ಮನೋಭಾವ ಹೊಂದಿರಬೇಕು ಎಂದರು.

ಕುಶಿ ಶೆಟ್ಟಿ, ಮೊಹಮ್ಮದ್ ಸೌದ್, ಸಾಕ್ಷಿ, ಸುಮಿತ್ ಕುಂದರ್, ಮಾನಸ ಹಾಗೂ ಮೋಕ್ಷಿತ್ ವೇದಿಕೆಯ ನೂತನ ವಿದ್ಯಾರ್ಥಿ ಸಂಯೋಜಕರಾಗಿ ನಿಯೋಜಿಸಲಾಯಿತು.ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಸಹಾಯಕ ಪ್ರಾಧ್ಯಾಪಕಿ ಸೋನಿ, ಸುಹಾಸ್ ಶೆಟ್ಟಿ ವಿದ್ಯಾರ್ಥಿ ಸಂಯೋಜಕರಾದ ದೀಪಕ್, ಮಾನಸ ಮತ್ತು ವೈಶಾಖ್ ಇದ್ದರು. ಸಪ್ತಶ್ರೀ ನಿರೂಪಿಸಿ, ಇಶಿಕಾ ಅಂಚನ್ ಸ್ವಾಗತಿಸಿ, ಅಫ್ತಾಬ್ ರಹ್ಮಾನ್ ಅತಿಥಿಯನ್ನು ಪರಿಚಯಿಸಿದರು. ರಶ್ಮಿ ಶೆಟ್ಟಿ ವಂದಿಸಿದರು.