ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕೃತಕ ಬುದ್ಧಿಮತ್ತೆಯ ಬೆಳವಣಿಗೆಯಿಂದ ಸಂವೇದನಾಶೀಲ ಜ್ಞಾನ ಅಥವಾ ಸೂಚ್ಯ ಜ್ಞಾನದ ಬಳಕೆ ಕ್ಷೀಣಿಸುತ್ತಿರುವ ಆತಂಕಕಾರಿ ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದ್ದಾರೆ.ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ 2025-26 ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ- ಸ್ವಾಗತ ಕಾರ್ಯಕ್ರಮ ‘ಆಳ್ವಾಸ್ ಆಗಮನ’ ದಲ್ಲಿ ಅವರು ಮಾತನಾಡಿದರು.ಕೃತಕ ಬುದ್ಧಿಮತ್ತೆ ಮೇಲೆ ಸಂಪೂರ್ಣ ಅವಲಂಬನೆಯಾದರೆ ಮನುಷ್ಯನ ಅನುಭವದಿಂದ ಕಲಿಯುವ ಶಕ್ತಿ, ಪ್ರಶ್ನಿಸುವ ಸ್ವಭಾವ, ಆಳವಾದ ಚಿಂತನೆ ಸೃಜಿಸಲಾರದು. ಎಐ ಅನ್ನು ಪ್ರೇರಕ ಶಕ್ತಿಯಾಗಿ ಬಳಸಿಕೊಳ್ಳುವುದು ಸೂಕ್ತ. ಅದು ನಮಗೆ ಹೊಸ ಆಲೋಚನೆಗಳನ್ನು ಹುಟ್ಟಿಸಬಲ್ಲದು, ಆದರೆ ಆ ಆಲೋಚನೆಗಳಿಗೆ ಜೀವ ತುಂಬಲು ಮನುಷ್ಯನಿಂದ ಮಾತ್ರ ಸಾಧ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಈ ಆವರಣದ ಮೂಲ ಶಕ್ತಿ ನಮ್ಮ ವಿದ್ಯಾರ್ಥಿಗಳು, ಪೋಷಕರು ಹಾಗೂ ಪಾಲಕರು. ನಮ್ಮ ನಿಜವಾದ ಬ್ರಾಂಡ್ ನಮ್ಮ ವಿದ್ಯಾರ್ಥಿಗಳು ಎಂದರು.ಆಳ್ವಾಸ್ ಆಗಮನದದ ಹಿನ್ನಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 12 ದಿನಗಳಲ್ಲಿ ಒಟ್ಟು 55ಕ್ಕೂ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಪ್ರಮುಖ ಜ್ಞಾನ ಶಾಖೆಗಳಲ್ಲಿ ತರಬೇತಿ ಹಾಗೂ ಕಾರ್ಯಾಗಾರ ನಡೆಯಲಿದೆ.ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ಫರ್ನಾಂಡಿಸ್ ಕಾಲೇಜಿನ ವೈಶಿಷ್ಟ್ಯತೆ ಪ್ರಸ್ತುತ ಪಡಿಸಿದರು. ಕಾಲೇಜಿನ ರಿಸರ್ಚ್ ಡೀನ್ ಡಾ ರಿಚರ್ಡ್ ಪಿಂಟೋ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು. ಡಾ ಶಶಿಕುಮಾರ್ ಸ್ವಾಗತಿಸಿ, ಡಾ ರಾಮ್‌ಪ್ರಸಾದ ವಂದಿಸಿದರು. ವಿದ್ಯಾರ್ಥಿನಿ ಶಾರ್ವರಿ ಶೆಟ್ಟಿ ನಿರೂಪಿಸಿದರು.