ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದಾಗಿದ್ದು, ಭಾಷೆ, ವೇಷ, ಸಂಸ್ಕೃತಿ, ಆಚಾರ- ವಿಚಾರ ದೇಶದ ಶ್ರೀಮಂತಿಕೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಸಾರುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸಿಕೊಡುತ್ತಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಯಾವುದೇ ಕಲಾವಿದರಿಗೆ ಕಡಿಮೆ ಇಲ್ಲದಂತೆ ತಮ್ಮ ಪ್ರತಿಭೆಯನ್ನು ಪ್ರರ್ದಶಿಸಿದ್ದು , ಇದರಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವರವರ ಪರಿಶ್ರಮ ಎದ್ದು ಕಾಣುತ್ತದೆ. ಈ ರಾಷ್ಟ್ರದ ವಿವಿಧ ಭಾಗಗಳ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಸಂಗತಿ ಎಂದರು.
ನಗರಸಭಾ ಅಧ್ಯಕ್ಷ ಎಂ ಸಮೀವುಲ್ಲಾ ಮಾತನಾಡಿ, ಸನಾತನ ಸಂಸ್ಕೃತಿಯ ಸುದೀರ್ಘ ಇತಿಹಾಸವಿರುವ ಭಾರತವು ನಾನಾ ಕಲೆ-ಸಂಸ್ಕೃತಿಯ ತಾಯಿಬೇರಾಗಿದೆ. ವೇಷ ಬೇರೆ, ಭಾಷೆ ಬೇರೆ ಇದ್ದರೂ ಪ್ರತ್ಯೇಕ ಆಚಾರ-ವಿಚಾರಗಳನ್ನು ಪಾಲಿಸುತ್ತಾ ಬಂದರೂ ಕಲೆ, ಸಂಸ್ಕೃತಿ ೧೩೦ ಕೋಟಿ ಭಾರತೀಯರಲ್ಲಿ ಸಹೋದರತ್ವವನ್ನು ಬೆಸೆಯುವ ಮೂಲಕ ಸಂಸ್ಕೃತಿಯಾಗಿದೆ. ಇಲ್ಲಿನ ಜಾನಪದ ಕಲೆಗಳು ಸೇರಿದಂತೆ ಭರತನಾಟ್ಯ, ಯಕ್ಷಗಾನ, ಕುಚುಪುಡಿ ಹೀಗೆ ಪ್ರತಿಯೊಂದು ಸಾಂಸ್ಕೃತಿಕ ಕಲೆಗಳು ಭಾರತದ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿದೆ ಎಂದು ಹೇಳಿದರು.ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ನಮ್ಮ ಸಾಂಸ್ಕೃತಿಕ ಕಲಾ ಸಂಸ್ಕೃತಿಯನ್ನ ಉಳಿಸಿ ಬೆಳೆಸುವುದು ಸರಕಾರದ ಜವಾಬ್ದಾರಿ ಮಾತ ಎಂದು ಬಹುತೇಕರು ಸುಮ್ಮನಾಗುತ್ತಿದ್ದಾರೆ. ಆದ್ದರಿಂದ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಸದುದ್ದೇಶದಿಂದ ಆಳ್ವಾಸ್ ಸಾಂಸ್ಕೃತಿಕ ವೈಭವದ ಹೆಸರಿನಲ್ಲಿ ಸಮಾನ ಮನಸ್ಕರನ್ನ ಒಗ್ಗೂಡಿಸಿಕೊಂಡು ಆಳ್ವಾಸ್ ವಿಶ್ವನುಡಿ ಸಿರಿ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉದ್ಯಮಿ ಅರುಣ್ ಕುಮಾರ್, ಅನಂತ ಸದ್ವಿದ್ಯ ಸಂಸ್ಥೆಯ ಮುಖ್ಯಸ್ಥ ಆರ್.ಅನಂತ್ ಕುಮಾರ್ ಉದ್ಯಮಿ ಜಿ.ವಿ ಬಸವರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.