ಸಾರಾಂಶ
ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, ಭೀಮಸೇನ ಜೋಶಿ ಪ್ರಶಸ್ತಿ, ಕಾಳಿದಾಸ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಡಿಸೆಂಬರ್ 10ರಿಂದ 15ರ ವರೆಗೆ ನಡೆಯುವ ಆಳ್ವಾಸ್ ವಿರಾಸತ್- 2024 ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ನೀಡುವ ಪ್ರಸಕ್ತ ವರ್ಷದ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ಗೆ ಹಿಂದೂಸ್ಥಾನಿ ಸಂಗೀತಲೋಕದ ದಿಗ್ಗಜ ಗಾಯಕ ಮತ್ತು ಗುರು ಪದ್ಮಶ್ರೀ ಪುರಸ್ಕೃತ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ.ಬಳ್ಳಾರಿಯ ಲಕ್ಷ್ಮೀಪರದಲ್ಲಿ ಜನಿಸಿದ ವೆಂಕಟೇಶ್ ಕುಮಾರ್ ಅವರಿಗೆ ಜಾನಪದ ಗಾಯಕ ಮತ್ತು ತೊಗಲು ಬೊಂಬೆಯಾಟಗಾರರಾಗಿದ್ದ ತಂದೆ ಹುಲೆಗಪ್ಪನವರೇ ಮೊದಲ ಗುರುಗಳು. ಗುರು ಪುಟ್ಟರಾಜ ಗವಾಯಿಗಳಿಂದ ಗ್ವಾಲಿಯರ್ ಮತ್ತು ಕಿರಾಣಾ ಘರಾಣಾ ಶೈಲಿಯ ಎಲ್ಲ ಹೊಳಹುಗಳನ್ನು ಕಲಿತ ಅವರು ಕರ್ನಾಟಕ ಸಂಗೀತದಲ್ಲಿಯೂ ನಿಸ್ಸೀಮರು. ಭಕ್ತಿ ಸಂಗೀತದಲ್ಲಿ ಕನ್ನಡ ವಚನ ಮತ್ತು ದಾಸರಪದ ಗಾಯನಕ್ಕಾಗಿ ವೆಂಕಟೇಶ್ ಕುಮಾರ್ ಪ್ರಸಿದ್ಧರಾಗಿದ್ದಾರೆ.
ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ, ಭೀಮಸೇನ ಜೋಶಿ ಪ್ರಶಸ್ತಿ, ಕಾಳಿದಾಸ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶ-ವಿದೇಶಗಳ ಪ್ರಮುಖ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ ಹಿರಿಮೆ ವೆಂಕಟೇಶ್ ಕುಮಾರ್ ಅವರದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.