ಡಿ.10 ರಿಂದ 15ರವರೆಗೆ 30ನೇ ವರ್ಷದ ಆಳ್ವಾಸ್‌ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ

| Published : Dec 05 2024, 12:32 AM IST

ಡಿ.10 ರಿಂದ 15ರವರೆಗೆ 30ನೇ ವರ್ಷದ ಆಳ್ವಾಸ್‌ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಡಿ. 15ರಂದು ಕೃಷಿ, ಆಹಾರ, ಫಲಪುಷ್ಪ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ, ಚಿತ್ರಕಲೆ, ಕಲಾಕೃತಿ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮೇಳ ದಿನಪೂರ್ತಿ ತೆರೆದಿರುತ್ತದೆ ಎಂದು ಡಾ. ಎಂ. ಮೋಹನ್‌ ಆಳ್ವ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ‘ಆಳ್ವಾಸ್‌ ವಿರಾಸತ್‌-2024 ’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿ.10 ರಿಂದ 15ರ ವರೆಗೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.

30ನೇ ವರ್ಷದ ಆಳ್ವಾಸ್‌ ವಿರಾಸತ್‌ನಲ್ಲಿ ಈ ವರ್ಷ ವಿಶೇಷ ಆಕರ್ಷಣೆಯಾಗಿ ಕೈಮಗ್ಗ ಸೀರೆಗಳ ಉತ್ಸವವನ್ನು ಆಯೋಜಿಸಲಾಗಿದೆ. ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್‌ ಹೊಂದಿರುವ ಕೈಮಗ್ಗ ಸೀರೆ ಹಾಗೂ ಬಟ್ಟೆಗಳ ಉತ್ಸವ ವಿರಾಸತ್‌ನಲ್ಲಿ ಇರಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ನೇ ಸಾಲಿನ ಆಳ್ವಾಸ್‌ ವಿರಾಸತ್‌ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ನೇಕಾರರಿಂದ ಗ್ರಾಹಕರಿಗೆ ನೇರ ಮಾರಾಟವೂ ನಡೆಯಲಿದೆ. ಉಡುಪಿ, ಇಳಕಲ್‌, ಕೋಲ್ಕತ್ತಾ, ತುಮ್ಮಿನಕಟ್ಟೆ, ವೆಂಕಟಗಿರಿ, ಕಾಶ್ಮೀರಿ, ಕಾಂಚೀವರಮಂ, ಮೈಸೂರು, ಕೊಳ್ಳೇಗಾಲ, ದಾವಣಗೆರೆ, ಚೆಟ್ಟಿನಾಡ್‌, ಕೇರಳ, ಹೈದರಾಬಾದ್‌, ಮದ್ರಾಸ್‌ನ ಸೀರೆಗಳು ಮತ್ತು ಬಟ್ಟೆಗಳು ಈ ಮೇಳದಲ್ಲಿರಲಿದೆ. ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದೊಂದಿಗೆ ಈ ಉತ್ಸವ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.ಡಾ.ಹೆಗ್ಗಡೆ ಉದ್ಘಾಟನೆ: ಡಿ. 10ರ ಸಂಜೆ 5.30ರಿಂದ 6.30ರ ವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟನೆ ನೆರವೇರಿಸುವರು. ಉಡುಪಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಜಿ. ಶಂಕರ್‌ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.ಸಂಜೆ 6.35ರಿಂದ 8.30ರವರೆಗೆ 100ಕ್ಕೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳಿಂದ ಕೂಡಿದ 3,000ಕ್ಕೂ ಅಧಿಕ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾತ್ರಿ 8.30ರಿಂದ 9.30ರ ವರೆಗೆ ಆಳ್ವಾಸ್‌ ವಿರಾಸತ್‌ ಸಾಂಸ್ಕೃತಿಕ ರಥ ಸಂಚಲನ ಹಾಗೂ ರಥಾರತಿ ನಡೆಯಲಿದೆ ಎಂದರು.

ಡಿ.11ರಂದು ವಿರಾಸತ್‌ ಪ್ರಶಸ್ತಿ ಪ್ರದಾನ: ಡಿ. 11ರಂದು ಸಂಜೆ 5.45 ರಿಂದ 6.30ರವರೆಗೆ ಆಳ್ವಾಸ್‌ ವಿರಾಸತ್‌ -2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 6.35ರಿಂದ 7.30ರವರೆಗೆ ಹಿಂದೂಸ್ಥಾನಿ ಗಾಯನ, ಬಳಿಕ 7.45ರಿಂದ 9ರ ವರೆಗೆ ಗುಜರಾತ್‌ನ ರಂಗ್‌ ಮಲಹರ್‌ ದಿ. ಫೋಕ್‌ ಆರ್ಟ್ಸ್‌ ತಂಡದಿಂದ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಆಳ್ವಾಸ್‌ ವೈವಿಧ್ಯಮಯ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.

ಡಿ. 12ರಂದು ಸಂಜೆ 6ರಿಂದ 8ರವರೆಗೆ ಗುಜರಾತ್‌ನ ಒಸ್ಮಾನ್‌ ಮೀರ್‌ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ರಾತ್ರಿ 9.15ರಿಂದ ಆಳ್ವಾಸ್‌ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ ಎಂದರು.

ಡಿ.13ರಂದು ಸಂಜೆ 6 ರಿಂದ 8ರವರೆಗೆ ನೀಲಾದ್ರಿ ಕುಮಾರ್‌ ಮತ್ತು ತಂಡದಿಂದ ‘ಸೌಂಡ್‌ ಆಫ್‌ ಇಂಡಿಯಾ’ ಹಾಗೂ 8.15ರಿಂದ 9ರ ವರೆಗೆ ಕೋಲ್ಕತ್ತಾದ ಆಶೀಮ್‌ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್‌ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್‌ ಫರ್‌ಫಾರ್ಮಿಂಗ್‌ ಆರ್ಟ್ಸ್‌ ನೃತ್ಯೋಲ್ಲಾಸ ಹಾಗೂ ಬೆಂಗಳೂರು ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ. ಡಿ. 14ರಂದು ಸಂಜೆ 6ರಿಂದ 9ರವರೆಗೆ ಚೆನ್ನೈನ ಸ್ಟೆಕೇಟೋದ 25 ಕಲಾವಿದರಿಂದ ಸಂಗೀತ ರಸದೌತಣ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ ಎಂದರು.

ಡಿ. 15ರಂದು ಕೃಷಿ, ಆಹಾರ, ಫಲಪುಷ್ಪ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ, ಚಿತ್ರಕಲೆ, ಕಲಾಕೃತಿ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮೇಳ ದಿನಪೂರ್ತಿ ತೆರೆದಿರುತ್ತದೆ ಎಂದು ಡಾ. ಎಂ. ಮೋಹನ್‌ ಆಳ್ವ ತಿಳಿಸಿದರು.

ಆಳ್ವಾಸ್‌ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ಇದ್ದರು.