ಸಾರಾಂಶ
ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವದಲ್ಲಿ ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆಹನ್ನೆರಡನೇ ಶತಮಾನವು ಶ್ರೇಷ್ಠ ವಚನಕಾರರ, ಬದಲಾವಣೆಯ ಹರಿಕಾರರ ಯುಗವಾಗಿದ್ದು, ಶಿವಯೋಗಿ ಸಿದ್ದರಾಮೇಶ್ವರರ ಕಾಯಕ ಇಂದಿಗೂ ಪ್ರಸ್ತುತ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಭೋವಿ ಸಮಾಜದಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕಾಯಕ ಯೋಗಿಗಳಾಗಿದ್ದ ಶಿವಯೋಗಿ ಸಿದ್ದರಾಮೇಶ್ವರರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪನೆಯಾಗಿದ್ದ ಅನುಭವ ಮಂಟಪದಲ್ಲಿ ತಮ್ಮ ಕಾಯಕ ನಿಷ್ಠೆಯಿಂದಲೇ ಶಿವಯೋಗಿ ಸಿದ್ದರಾಮೇಶ್ವರರ ಗುರುತಿಸಿಕೊಂಡವರು, ಸದಾ ಸಮಾಜದ ಒಳಿತಿಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು, ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ನಿರ್ವಹಿಸಿದ್ದರು.ಶರಣರ ಯುಗದಲ್ಲಿ ಕಾಯಕ ಮತ್ತು ವಚನ ಸಾಹಿತ್ಯಕ್ಕೆ ಸಿದ್ದರಾಮೇಶ್ವರರ ಕೊಡುಗೆಯೂ ಅವಿಸ್ಮರಣೀಯ ಎಂದು ಹೇಳಿದರು.
ಕಾಯಕ ತತ್ವಗಳ ಅಳವಡಿಸಿಕೊಳ್ಳಿ:ಜಾತಿ, ಮತ, ಪಂಥವೆನ್ನದೇ ನಾವೆಲ್ಲರೂ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವ ಆಚರಿಸುವ ಮೂಲಕ ಇಂತಹ ಮಹನೀಯರ ಕಾಯಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇಂತಹ ಮಹಾನ್ ಶರಣರ ಸ್ಮರಣೆಯ ಮೂಲಕ ಸಮಾಜವು ತನ್ನನ್ನು ತಾನು ಅರಿತು, ಬದಲಾಗಬೇಕಿದೆ. ಬಸವಾದಿ ಶರಣರು ಕಾಯಕವನ್ನೇ ಕೈಲಾಸವೆಂದು ಕರೆದವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಮಾನತೆಯ ಬೀಜ ಬಿತ್ತಿದ ಕಾಲ ಅದು ಎಂದು ಸ್ಮರಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಭೋವಿ ಸಮಾಜದ ಹಿರಿಯ ಮುಖಂಡ ಡಿ.ಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಯುವ ಮುಖಂಡರಾದ ಪಾಲಿಕೆ ಸದಸ್ಯ ಆರ್.ಶಿವಾನಂದ, ಮಂಜುನಾಥ, ಎಚ್.ಶ್ರೀನಿವಾಸ, ಜಯಣ್ಣ ಇತರರು ಇದ್ದರು. ಇದೇ ವೇಳೆ ರಾ.ಲ.ಕಾನೂನು ಕಾಲೇಜಿನ ಪ್ರಾಧ್ಯಾಪಕ ಟಿ.ವಿದ್ಯಾಧರ ಮೂರ್ತಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಕುರಿತಂತೆ ಉಪನ್ಯಾಸ ನೀಡಿದರು.ಕೆರೆ ಕಟ್ಟೆ ಕಟ್ಟಿ ಪುಣ್ಯದ ಕೆಲಸ
ಕೆರೆ ಕಟ್ಟೆಗಳ, ಕಾಲುವೆಗಳ, ಕಟ್ಟುವ ಕರ್ಮ ಮಾರ್ಗದಲ್ಲಿ ಸಾಗಿ ಮಾನವ ಜನ್ಮದ ಸಾರ್ಥಕತೆ ನಿರೂಪಿಸಿದ ಬಸವಣ್ಣ ಹಾಗೂ ಶರಣರ ಭೇಟಿಯಿಂದ ಜ್ಞಾನಮಾರ್ಗದಲ್ಲಿ ಸಾಗಿದವರು ಶಿವಯೋಗಿ ಸಿದ್ದರಾಮೇಶ್ವರರು. ಆ ಕಾಲದಲ್ಲಿ ಕೆರೆ ಕಟ್ಟೆ ಕಟ್ಟುವುದು ಮಹಾನ್ ಪುಣ್ಯದ ಕೆಲಸ. ಅಂತಹ ಪುಣ್ಯದ ಕಾಯಕ ಮಾಡಿದ ಶಿವಯೋಗಿ ಸಿದ್ದರಾಮೇಶ್ವರರು, ಇಂತಹ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ.ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ