ಸಾರಾಂಶ
ಜಮಖಂಡಿ : ಜಮಖಂಡಿ ಕ್ಷೇತ್ರದ ಆಭಿವೃದ್ಧಿಗೆ ತಮ್ಮ ಸಹಕಾರ ಯಾವಾಗಲೂ ಇದ್ದೇ ಇರುತ್ತದೆ. ಆದರೆ ಇದೀಗ ಪ್ರಯತ್ನ ಆಗದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಧಿಕಾರದಲ್ಲಿರುವವರು ವಿರೋಧ ಪಕ್ಷದಲ್ಲಿದ್ದರೂ ಸಂಬಂಧಪಟ್ಟ ಇಲಾಖೆಗಳ ಮಂತ್ರಿಗಳಿಗೆ ಮತ್ತು ಅಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟು ಅನುದಾನ ತರುವ ಅವಶ್ಯಕತೆ ಬಹಳ ಇದೆ. ತುಂಗಳ ಸಾವಳಗಿ ಏತನೀರಾವರಿಗೆ ನೀರು ಹರಿಸುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಲಾಗಿದೆ. ಹಲ್ಯಾಳ ಏತ ನೀರಾವರಿಯ ಎರಡು ಪಂಪ್‌ಗಳ ಪೈಕಿ ಒಂದು ಮಾತ್ರ ಚಾಲ್ತಿಯಲ್ಲಿದೆ. ಮತ್ತೊಂದು ದುರಸ್ತಿಗೆ ಹೋಗಿರುವುದರಿಂದ ನೀರು ಎತ್ತಲು ಕಷ್ಟವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪಂಪ್ ದುರಸ್ತಿಯಾಗಿ ಸಾವಳಗಿ, ತುಂಗಳ ಭಾಗಕ್ಕೆ ನೀರು ಬರುತ್ತದೆ ಎಂಬ ವಿಶ್ವಾಸವಿದೆ ಎಂದರು.
ಅಧಿಕಾರಿಗಳ ನಿರ್ಲಕ್ಷ:
ಮಳೆಗಾಲ ಪ್ರಾರಂಭಕ್ಕೆ ಮುಂಚೆ ಅಧಿಕಾರಿಗಳು ಕಾಲುವೆಗಳ ಹೂಳೆತ್ತುವುದು ಮತ್ತು ಪಂಪ್‌ಸೆಟ್‌ಗಳ ಸ್ಥಿತಿಯನ್ನು ಪರಿಶೀಲಿಸಿ ನೀರೆತ್ತಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಸಾವಳಗಿ ತುಂಗಳ ಭಾಗದ ರೈತರಿಗೆ ನೀರಿನ ಸಮಸ್ಯೆಯಾಗಿದೆ ಎಂದರು.
ವೈಜ್ಞಾನಿಕ ಯೋಜನೆ:
ಹಲ್ಯಾಳ ಏತ ನೀರಾವರಿ ಯೋಜನೆ ವೈಜ್ಞಾನಿಕವಾಗಿದೆ. ಸಿದ್ದು ನ್ಯಾಮಗೌಡ ಅವರು ಅಧಿಕಾರದಲ್ಲಿದ್ದಾಗ ಯೋಜನೆಯ ಅನುಷ್ಠಾನ ವಾಗಿತ್ತು. ಆಗಿನ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಎಲ್ಲಾ ರೈತರು ಕಬ್ಬು ಬೆಳೆಯಲು ಪ್ರಾರಂಭಿಸಿದ್ದರಿಂದ ನೀರಿನ ಬೇಡಿಕೆ ಹೆಚ್ಚಿದೆ ಎಂದರು.
ನೀರಾವರಿ ಯೋಜನೆಗಳಿಗೆ ರೈತರಿಂದ ವಂತಿಕೆ ಸಂಗ್ರಹಿಸಿ ಉಪಕಾಲುವೆಗಳ ನಿರ್ಮಾಣ ಮುಂತಾದ ಅಭಿವೃದ್ಧಿಗಳನ್ನು ಮಾಡಿಕೊಳ್ಳಬೇಕು. ಆದರೆ ರೈತರಿಂದ ದೇಣಿಗೆ ಸಂಗ್ರಹಿಸುವುದು ಕಷ್ಟಸಾಧ್ಯ. ತುಬಚಿ ಗ್ರಾಮದ ಬಳಿ ಕೆರೆ ತುಂಬುವ ಏತ ನೀರಾವರಿ ಯೋಜನೆಯಗೆ ₹20 ಕೋಟಿ ಅನುದಾನವಿತ್ತು. ಆದರೆ ಯೋಜನೆ ನಿಂತು ಹೋಗಿದೆ. ಈ ಕುರಿತು ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ಮಾಡಬೇಕಿದೆ ಎಂದು ವಿವರಿಸಿದರು.
ಯುಕೆಪಿ ರಾಷ್ಟ್ರೀಯ ಯೋಜನೆ ಘೋಷಿಸಿ:
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಮತ್ತು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದರು.
ಈ ವೇಳೆ ಮುಖಂಡರಾದ ಬಿ.ಎಸ್.ಸಿಂಧೂರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, ಡಿಎಸ್ಎಸ್ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ, ಅರ್ಜುನ ದಳವಾಯಿ, ಹಾಗೂ ಮಲ್ಲು ಶಿರಹಟ್ಟಿ, ರೋಹಿತ ಸೂರ್ಯವಂಶಿ, ಕುಮಾರ ಆಲಗೂರ, ಗುರು ದಡ್ಡಿಮನಿ ಮುಂತಾದವರಿದ್ದರು.