ಸಾರಾಂಶ
-ವಲ್ಲಭಬಾಯಿ ಪಟೇಲ ಪ್ರತಿಮೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಪೂಜೆ
-----ಕನ್ನಡಪ್ರಭ ವಾರ್ತೆ ಸುರಪುರ
ನಮ್ಮ ದೇಶಕ್ಕೆ 15 ಆಗಸ್ಟ್ 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತಿದ್ದರೆ, ಹೈದರಬಾದಿನ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಈ ಭಾಗದ ಜಿಲ್ಲೆಗಳಿಗೆ 17 ಸೆಪ್ಟೆಂಬರ್ 1948 ರಲ್ಲಿ ದಾಸ್ಯದಿಂದ ಮುಕ್ತಿ ದೊರೆಯಿತು. ಇದಕ್ಕೆ ಅಂದಿನ ಗೃಹ ಸಚಿವ ಸರ್ದಾರ ವಲ್ಲಭಭಾಯ್ ಪಟೇಲ ಕಾರಣ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ಸರ್ದಾರ ವಲ್ಲಭಬಾಯಿ ಪಟೇಲ ವೃತ್ತದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಭಾಗದ ಅರಸರು, ನಾಯಕರು, ಮುಖಂಡರು, ಹಿರಿಯರ ಹೋರಾಟ ಅವಿಸ್ಮರಣೀಯ. ವಿಮೋಚನೆಗಾಗಿ ಹೋರಾಟಗೈದು ಪ್ರಾಣ ತ್ಯಾಗ ಮಾಡಿದವರನ್ನು ಸದಾ ಸ್ತುತಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗವು ಸಾಕಷ್ಟು ಹಿಂದುಳಿದಿದೆ. ಅಭಿವೃದ್ಧಿಗೆ ನಾಯಕರು ಒತ್ತು ಕೊಡಬೇಕಿದೆ. ಸುರಪುರ ಮತಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ, ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದು ತಿಳಿಸಿದರು.ತಹಸೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಉಪನ್ಯಾಸ ನೀಡಿದರು.
ನಗರಸಭೆಯಿಂದ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ನೆರವೇರಿಸಿದರು. ನಗರಸಭೆಯಲ್ಲಿ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್ ಧ್ವಜಾರೋಹಣ ನೆರವೇರಿಸಿದರು.ಯುವ ನಾಯಕರಾದ ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ, ನಗರಸಭೆ ಅಧ್ಯಕ್ಷ ಹೀನಾ ಕೌಸರ್, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ, ನಗರಯೋಜನೆ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ. ಆರ್.ವಿ. ನಾಯಕ, ಪೌರಾಯುಕ್ತ ಜೀವನ್ ಕಟ್ಟಿಮನಿ, ಪೊಲೀಸ್ ಅಧಿಕಾರಿಗಳು, ನಗರಸಭೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
--17ವೈಡಿಆರ್9: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಸುರಪುರ ನಗರದ ಸರ್ದಾರ ವಲ್ಲಭಬಾಯಿ ಪಟೇಲ ಅವರ ಪ್ರತಿಮೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಪೂಜೆ ಸಲ್ಲಿಸಿದರು.