ಜಾನುವಾರುಗಳ ಕುಶಲೋಪರಿಗೆ ಸದಾ ಸಿದ್ಧ: ತಿಪ್ಪೇಶ್

| Published : Feb 10 2024, 01:47 AM IST / Updated: Feb 10 2024, 05:02 PM IST

ಸಾರಾಂಶ

ಚಳ್ಳಕೆರೆ ನಗರದ ಬೊಮ್ಮದೇವರ ಹಟ್ಟಿಯ ದೇವರ ಎತ್ತುಗಳಿಗೆ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷ ಸಿರಿಗೆರೆ ತಿಪ್ಪೇಶ್ ಮೇವು, ಬೂಸಾ, ಹಿಂಡಿ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಮ್ಮ ಬುಡಕಟ್ಟು ಸಂಪ್ರದಾಯದ ಆರಾಧ್ಯ ದೈವವಾದ ದೇವರ ಎತ್ತುಗಳ ರಕ್ಷಣೆಗೆ ನಾವು ಸದಾ ಸಿದ್ಧರಿದ್ದೇವೆ. ನಾವು ಜೊತೆಗೂಡಿ ದಾನಿಗಳ ಸಹಾಯದಿಂದ ದೇವರ ಎತ್ತುಗಳಿಗೆ ಮೇವು, ನೀರಿನ ಶಾಶ್ವತ ವ್ಯವಸ್ಥೆ ಮಾಡುವ ಆಲೋಚನೆ ಇದೆ ಎಂದು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷ ಸಿರಿಗೆರೆ ತಿಪ್ಪೇಶ್ ತಿಳಿಸಿದರು.

ತಾಲೂಕಿನ ಬೊಮ್ಮದೇವರಹಟ್ಟಿಯಲ್ಲಿನ ದೇವರ ಎತ್ತುಗಳಿಗೆ ಸಂಘಟನೆ ವತಿಯಿಂದ ನೀಡಲಾದ ಬೂಸಾ, ಹಿಂಡಿ, ಮೇವು ವಿತರಿಸಿ ಮಾತನಾಡಿದರು. ಸರ್ಕಾರ ಮಠಮಾನ್ಯಗಳಿಗೆ ಕೋಟಿ, ಕೋಟಿ ಹಣ ನೀಡುವ ಬದಲು, ದೇವರ ಎತ್ತುಗಳ ರಕ್ಷಣೆಗೆ ನೀಡಬೇಕಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನಲ್ಲಿ ಸುಮಾರು 1800ಕ್ಕೂ ಹೆಚ್ಚು ದೇವರ ರಾಸುಗಳಿವೆ. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಈ ಭಾಗದಲ್ಲಿ ಶಾಶ್ವತ ಮೇವು, ನೀರಿನ‌ ವ್ಯವಸ್ಥೆ ಮಾಡುವ ಉದ್ದೇಶದಿಂದ ಶ್ರೀವಾಲ್ಮೀಕಿ ಪುಣ್ಯಾನಂದಪುರಿ ಮಹಾಸ್ವಾಮಿ, ಸಾಲುಮರದ ತಿಮ್ಮಕ್ಕ ಮತ್ತು ನಟ ಸುದೀಪರವರನ್ನು ಭೇಟಿ ಮಾಡಿ ದೇವರ ಎತ್ತುಗಳು ಇರುವ ಸ್ಥಳದಲ್ಲಿ ಶಾಶ್ವತ ಮೇವು ಬೆಳೆಯುವ ಯೋಜನೆ ರೂಪಿಸಲು ಮನವಿ ಮಾಡಲಾಗುವುದು. ಪ್ರಸ್ತುತ ನಮ್ಮ ಸಂಘಟನೆ, ಸ್ನೇಹಿತರು ಗೋರಕ್ಷಣೆ, ಬುಡಕಟ್ಟು ಪರಂಪರೆ ರಕ್ಷಣೆ ಮಾಡುವ ಉದ್ದೇಶದಿಂದ ಈ ಕಾರ್ಯಕೈಗೊಂಡಿದ್ದೇವೆ ಎಂದರು.

ಮಂಜುನಾಥ ಮಾತನಾಡಿ, ಗೋಪರಂಪರೆ ನಮ್ಮ ಸಂಸ್ಕೃತಿ, ಅತಿ ಹೆಚ್ಚು ಅಮೃತ ಮಹಲ್ ಗೋವುಗಳು ಉಳಿಯಲು ಮ್ಯಾಸಬೇಡ ಆರಾಧನೆಯೂ ಮೂಲ ಕಾರಣವಾಗಿದೆ. ಅತಿಹೆಚ್ಚು ಗೋರಕ್ಷಣೆ ಮಾಡುವಲ್ಲಿ ಈ ಸಮುದಾಯ ಶ್ರಮಿಸುತ್ತಿದೆ. ಇವರ ನೆರವಿಗೆ ಸರ್ಕಾರ ದಾವಿಸಬೇಕು, ಬಜೆಟ್ ನಲ್ಲಿ ಪ್ರತ್ಯೇಕ ಹಣ ಮೀಸಲಿಟ್ಟು ಶಾಶ್ವತ ಪರಿಹಾರ ಕಲ್ಪಿಸಬೇಕು.

 ರಾಜಕೀಯ ವ್ಯಕ್ತಿಗಳ ಇಚ್ಛಾಶಕ್ತಿ ಕೊರತೆಯಿಂದ ದೇವರ ಎತ್ತುಗಳಿಗೆ ಮೇವಿಲ್ಲದೆ ಸೊರಗಿವೆ. ಗೋರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕಿದೆ‌. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯಪ್ರವೃತರಾಗಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದರು.

ಗ್ರಾಪಂ ಸದಸ್ಯರಾದ ಚಿನ್ನಯ್ಯ, ಅಪ್ಪಣ, ಮುಖಂಡರಾದ ದೊರೆನಾಗರಾಜು, ಸೂರನಾಯಕ, ಪಾಲಯ್ಯ, ಗಾದ್ರಿಪಾಲಯ್ಯ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಉಪಾಧ್ಯಕ್ಷ ಬಾಬುನಾಯಕ, ರಮೇಶ್ ಯಲಹಂಕ, ಮಂಜುನಾಥನಾಯಕ, ಧರ್ಮಲಿಂಗಂ,‌ ಸುನೀಲ್‌ನಾಯಕ, ಅರ್ಜುನ್ ಪಾಳೇಗಾರ, ಲಕ್ಷ್ಮಣ್ ಪಾಳೇಗಾರ, ಗಿರೀಶ್ ಇತರರು ಉಪಸ್ಥಿತರಿದ್ದರು.