ತೆಂಗು ಬೆಳೆಗಾರರ ನೆರವಿಗೆ ಸದಾ ಸಿದ್ಧ : ಕೆ. ಷಡಕ್ಷರಿ

| Published : Jul 01 2024, 01:47 AM IST

ಸಾರಾಂಶ

ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಳೆಗೆ ಕನಿಷ್ಠ 16,000 ರು. ಬೆಂಬಲ ಬೆಲೆಯನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಶಾಸಕ ಕೆ. ಷಡಕ್ಷರಿ ಭರವಸೆ ನೀಡಿದರು.

ತಿಪಟೂರು: ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಳೆಗೆ ಕನಿಷ್ಠ 16,000 ರು. ಬೆಂಬಲ ಬೆಲೆಯನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಶಾಸಕ ಕೆ. ಷಡಕ್ಷರಿ ಭರವಸೆ ನೀಡಿದರು. ತಾಲೂಕಿನ ಹುಣಸೇಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ. ಮಲ್ಲೇನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ತೆಂಗಿನ ಬೆಳೆಗೆ ಸಮಗ್ರ ಕೀಟ ಬಾಧೆ ಸಂಬಂದ ರೈತರಿಗೆ ತರಬೇತಿ ಹಾಗೂ ಉಚಿತ ಔಷಧಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತೋಟಗಾರಿಕೆ ಇಲಾಖೆಯಿಂದ ಆಯೋಜನೆ ಮಾಡಿರುವ ಈ ತರಬೇತಿ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಮಾತನಾಡಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ ಬಳಸಬೇಕು. ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆಯಲ್ಲಿ ನೀಡುತ್ತಿರುವ ಪರಿಕರಗಳನ್ನು ವ್ಯಯ ಮಾಡದೇ ತಮ್ಮ ತೋಟಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಆರ್. ಚಂದ್ರಶೇಖರ್ ಮಾತನಾಡಿ, ತರಬೇತಿ ಕಾರ್ಯಕ್ರಮದ ಉದ್ದೇಶ ಹಾಗೂ ತೆಂಗಿನಲ್ಲಿ ಸಂಯೋಜಿತ ಬೇಸಾಯ ಯೋಜನೆಯ ಬಗ್ಗೆ ತಿಳಿಸಿದರು. ತೋಟಗಾರಿಕೆ ಸಂಶೋಧನಾ ಕೇಂದ್ರ ಬೋರನಕೊಪ್ಪಲು ಅರಸೀಕೆರೆಯ ವಿಜ್ಞಾನಿ ಡಾ. ಜಗದೀಶ್‌ರವರು ತೆಂಗಿನಲ್ಲಿ ಮಣ್ಣಿನ ನಿರ್ವಹಣೆ, ನೀರಿನ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ ಹಾಗೂ ಕೀಟ ಮತ್ತು ರೋಗಗಳ ನಿರ್ವಹಣೆಯ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡಿ ಬೇರಿನ ಮೂಲಕ ಔಷದೋಪಚಾರ ಮಾಡುವ ವಿಧಾನವನ್ನು ಪ್ರಾತ್ಯಕ್ಷಿತೆ ಮೂಲಕ ತಿಳಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ. ಕೆ.ಎಸ್ ನವೀನ್‌ಕುಮಾರ್, ಅಧಿಕಾರಿಗಳಾದ ಶಮಂತ, ಲಾವಣ್ಯ, ರತ್ನಮ್ಮ, ಶ್ರೀನಿವಾಸ, ಶ್ರೀನಿವಾಸಗೌಡ ಮತ್ತಿತರರಿದ್ದರು. 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.