ಸಾರಾಂಶ
ಬ್ಯಾಡಗಿ: ಶಾಲಾ ಅವಧಿಯಲ್ಲಿ ಕಲಿತ ಜ್ಞಾನ ಮಾತ್ರ ಬದುಕಿನ ಅಂತಿಮ ಹಂತದವರೆಗೂ ಜತೆಯಲ್ಲಿ ಇರಲಿದೆ. ಹೀಗಾಗಿ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಶಿಕ್ಷಕ ಉಪೇಂದ್ರ ಘೋರ್ಪಡೆ ಅಭಿಪ್ರಾಯಪಟ್ಟರು.
ತಾಲೂಕಿನ ಮಲ್ಲೂರಿನ ಎಸ್‌ಬಿಎಚ್‌ವಿ ಗ್ರಾಮಾಂತರ ಪ್ರೌಢಶಾಲೆ 1988- 89ನೇ ಸಾಲಿನ ಎಸ್ಸೆಸ್ಸಲ್ಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ತಾವು ಗಳಿಸಿದ ಆಸ್ತಿ- ಅಂತಸ್ತು ಯಾವುದೂ ಶಿಕ್ಷಣಕ್ಕೆ ಸಾಟಿಯಾಗುವುದಿಲ್ಲ. ಹೀಗಾಗಿ ಜ್ಞಾನವನ್ನು ಧಾರೆಯೆರೆದ ಶಿಕ್ಷಕರನ್ನು ಸದಾಕಾಲ ಸ್ಮರಿಸಿಕೊಳ್ಳಬೇಕಾಗುತ್ತದೆ ಎಂದರು.
ಕೇವಲ ಹಣದಿಂದಲೇ ಎಲ್ಲವೂ ಪಡೆದುಕೊಳ್ಳುತ್ತೇವೆ ಎನ್ನುವುದು ನಮ್ಮಲ್ಲಿರುವ ಭ್ರಮೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಲು ಪ್ರಾಥಮಿಕ ಹಂತದಲ್ಲಿ ಪಡೆದಂತಹ ಶಿಕ್ಷಣವೇ ಕಾರಣವೆಂಬುದನ್ನು ಮರೆಯಬಾರದು. ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರು ಜ್ಞಾನ ನೀಡಿದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಕೈಲಾದ ಕೊಡುಗೆ ನೀಡುವ ಮೂಲಕ ಋಣವನ್ನು ತೀರಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಮಲ್ಲೂರು ಗ್ರೂಪ್ ಶಿಕ್ಷಣ ಸಮಿತಿ ಅಧ್ಯಕ್ಷ ಮತ್ತು ನ್ಯಾಯವಾದಿ ಎಂ.ಆರ್. ಹೊಮ್ಮರಡಿ ಮಾತನಾಡಿ, ಯಾವುದೇ ಪ್ರಭಾವಕ್ಕೆ ಒಳಗಾಗದೆ ಎಲ್ಲರನ್ನೂ ಒಂದೇ ಎಂಬ ಭಾವನೆಯಿಂದ ಶೈಕ್ಷಣಿಕ ಜ್ಞಾನವನ್ನು ಶಿಕ್ಷಕರು ಧಾರೆ ಎರೆಯುತ್ತಾರೆ ಎಂದರು.ನಿವೃತ್ತ ಮುಖ್ಯಶಿಕ್ಷಕ ಜೆ.ವಿ. ಚಿಲ್ಲೂರಮಠ ಮಾತನಾಡಿ, ಇಂದಿನ ವಿಜ್ಞಾನ ತಂತ್ರಜ್ಞಾನ ಕಾಲದಲ್ಲಿ ಪ್ರಪಂಚವೇ ಒಂದು ಗ್ರಾಮದಂತಾಗಿದೆ. ಉದ್ಯೋಗ, ವ್ಯಾಪಾರ ಸೇರಿದಂತೆ ಇತರೆ ಕಾರಣಗಳಿಗೆ ಹುಟ್ಟಿದ ಊರನ್ನು ಬಿಟ್ಟು ಬೇರೆಲ್ಲೋ ನೆಲೆಸಿದವರು ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. ಆದರೆ ಪ್ರಸ್ತುತ ವಿದ್ಯಾರ್ಥಿಗಳು ಒಟ್ಟುಗೂಡಿಸುವ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ಧಾರೆ ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಸಿ. ಹಿರೇಮಠ, ಆರ್.ಐ. ತಳಗೇರಿ, ವಿ.ವಿ. ಹುಣಸಿಕಟ್ಟಿ, ಎಸ್.ಡಿ. ಕುಳೇನೂರ, ಪಿ.ಎಸ್. ಜಾಧವ, ಬಿ.ಎಸ್. ಹೂಗಾರ, ಎಸ್.ಐ. ನೂರಂದನವರ, ಪಾಂಡು ಜಾಧವ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.