ಸಾರಾಂಶ
ಮಕ್ಕಳು ಮಹನೀಯರ ತತ್ವ, ಸಿದ್ಧಾಂತಗಳನ್ನು ತಮ್ಮೊಳಗೆ ಆಳವಡಿಸಿಕೊಂಡು ಗೌರವ ಕೊಡಬೇಕು. ಮಕ್ಕಳಿಗೆ ಶಿಕ್ಷಣ ಹಾಗೂ ಜ್ಞಾನವನ್ನು ನೀಡಿ ಪೋಷಕರು ದೇಶದ ಕಲೆ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿ ಉತ್ತಮ ಪ್ರಜೆಯಾಗಿ ಮಾಡುವ ಶಿಕ್ಷಕರು, ಗುರು ಹಿರಿಯರನ್ನು ಗೌರವಿಸುವಂತೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ಹಲವು ಮಹನೀಯರನ್ನು ನಾವು ನಿತ್ಯ ನೆನೆಯಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳು ಮಹನೀಯರ ತತ್ವ, ಸಿದ್ಧಾಂತಗಳನ್ನು ತಮ್ಮೊಳಗೆ ಆಳವಡಿಸಿಕೊಂಡು ಗೌರವ ಕೊಡಬೇಕು. ಮಕ್ಕಳಿಗೆ ಶಿಕ್ಷಣ ಹಾಗೂ ಜ್ಞಾನವನ್ನು ನೀಡಿ ಪೋಷಕರು ದೇಶದ ಕಲೆ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿ ಉತ್ತಮ ಪ್ರಜೆಯಾಗಿ ಮಾಡುವ ಶಿಕ್ಷಕರು, ಗುರು ಹಿರಿಯರನ್ನು ಗೌರವಿಸುವಂತೆ ಮಾಡಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್.ಯೋಗೇಶ್ ಅವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ವಿವಿಧ ಶಾಲಾ ಮಕ್ಕಳು ಪಥ ಸಂಚಲನದ ಮೂಲಕ ಶಾಸಕರಿಗೆ ಗೌರವ ವಂದನೆ ನೀಡಿದರು. ನಂತರ ಮಕ್ಕಳು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಅವರಿಂದ ಧ್ವಜಾರೋಹಣದ ನಂತರ ಶಾಲಾ ಮಕ್ಕಳೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಐತಿಹಾಸಿಕ ಬತ್ತೇರಿ ಮೇಲೆ ತಹಸೀಲ್ದಾರ್ ಚೇತನಾ ಯಾದವ್ ಧ್ವಜಾರೋಹಣ ಮಾಡಿದರು.
ಈ ವೇಳೆ ತಾಪಂ ಇಒ ವೇಣು, ಡಿವೈಎಸ್‌ಪಿ ಶಾಂತ ಮಲ್ಲಪ್ಪ, ಪ್ರಭಾರ ಬಿಇಒ ನಂದೀಶ್ ಸೇರಿದಂತೆ ಇತರ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ, ಅಭಿನಂದಿಸಲಾಯಿತು.