ಸಾರಾಂಶ
ಆಲಮಟ್ಟಿ ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಭಾನುವಾರ ಶಾಲೆಯ 2000ನೇ ವರ್ಷ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಕಲಿತ ಶಾಲೆಯನ್ನು ಸದಾ ಸ್ಮರಿಸಿ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ವಿ.ಪಾಟೀಲ ಹೇಳಿದರು.ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಭಾನುವಾರ ಶಾಲೆಯ 2000ನೇ ವರ್ಷ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಲೆಯಂತಿದ್ದ ವಿದ್ಯಾರ್ಥಿಗಳನ್ನು ಮೂರ್ತಿಯನ್ನಾಗಿ ಮಾಡಲು ನೀವು ಕಲಿತ ಶಾಲೆ ಹಾಗೂ ಗುರುಗಳು ಕಾರಣ ಎಂದು ತಿಳಿಸಿದರು.
ಶಿಕ್ಷಕ ಅಶೋಕ ಹಂಚಲಿ ಅವರು 25 ವರ್ಷಗಳ ನಂತರೂ ಎಲ್ಲ ಶಿಷ್ಯ ಬಳಗದ ಹೆಸರು, ಅವರ ವಿಶೇಷತೆಗಳನ್ನು ಹೇಳಿ ಬೆರಗುಗೊಳಿಸಿದರು. ಆಧುನಿಕ ಕಾಲದಲ್ಲಿಯೂ ಗುರು-ಶಿಷ್ಯರ ಸಂಬಂಧಗಳನ್ನು ವಿವಿಧ ಉದಾಹರಣೆಗಳ ಮೂಲಕ ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಪ್ರಲಾಪದ ಭಾಗವನ್ನು ಹಳಗನ್ನಡದ ಕಾವ್ಯ ಭಾಗದಂತೆಯೇ ಹೇಳಿ ಕೇಳುಗರನ್ನು ರೋಮಾಂಚನಗೊಳ್ಳುವಂತೆ ಮಾಡಿದರು.ನಿವೃತ್ತ ಶಿಕ್ಷಕ ಎಂ.ಬಿ.ಗುಡದಿನ್ನಿ, ಎಸ್.ಎಸ್.ಭಾವಿಕಟ್ಟಿ, ಸಿ.ವಿ.ಖೇಡದ, ಬಿ.ಎನ್. ವಂದಾಲ, ಡಿ.ಜಿ.ಪಿಂಜಾರ, ಜಿ.ಎಸ್. ಪತ್ತಾರ, ಎಚ್.ಸಿ.ಭಜಂತ್ರಿ, ಐ.ಎಸ್.ಸಾಗರ, ಎಸ್.ಡಿ. ಭಾವಿಕಟ್ಟಿ, ನಾಗಪ್ಪ ವಾಲಿ, ಈರಣ್ಣ ಚಲ್ಮಿ, ಬಸವರಾಜ ಜಾಲಿಮಿಂಚಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಬಿ. ಇಜೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಕಾಂತ ಬೀಳಗಿ ಇದ್ದರು. ಚಿಮ್ಮಲಗಿ ಸಿದ್ಧರೇಣುಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಗಲಿದ ಗುರುಗಳ ಸಂಬಂಧಿಕರಿಗೂ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ರಾಘವೇಂದ್ರ ಹಟ್ಟಿ, ಎಸ್.ಎಸ್.ಚೆನ್ನಿ, ಲಾಲಸಾಬ್ ಮೇಲಿನಮನಿ, ರಾಜೇಸಾಬ್ ಬಾಗೇವಾಡಿ, ಈರಣ್ಣ ಬಸರಕೋಡ, ಸವಿತಾ ದೊಡಮನಿ, ವಿಠ್ಟಲ ತಳವಾರ, ಅಶೋಕ ಮೂಲಿ ಮಾತನಾಡಿ ತಾವು ಈ ಶಾಲೆಯಲ್ಲಿ ಕಲಿಯುವಾಗಿನ ಅನೇಕ ಘಟನೆಗಳನ್ನು ಮೆಲುಕು ಹಾಕಿದರು. ಎಲ್ಲಾ ವಿಷಯಗಳ ಶಿಕ್ಷಕರು ಕಲಿಸುತ್ತಿದ್ದ ರೀತಿ ಇಂದಿಗೂ ಅಚ್ಚಳಿಯದೆ ಉಳಿದ ವಿಶೇಷ ಅಂಶಗಳು ಜೀವನದಲ್ಲಿ ಅವುಗಳಿಂದ ಸಾಧಿಸಿದ ಉನ್ನತಿ ಹೀಗೆ ಹಲವಾರು ವಿಷಯಗಳನ್ನು ನೆನಪಿಸಿಕೊಂಡರು.