ಇಂದಿನ ಯುವಕರು ದೇಶದ ಮೊದಲು ನಂತರ ನಾವು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಧುನಿಕ ಜೀವನಶೈಲಿ ಮತ್ತು ತಂತ್ರಜ್ಞಾನದ ನಡುವೆ ದೇಶದ ಬಗ್ಗೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ರಾಷ್ಟ್ರ ಅಭಿಮಾನ ಮೆರೆಯಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರು ಮತ್ತು ಯೋಧರ ಸೇವೆಯನ್ನು ಸದಾ ಸ್ಮರಿಸಬೇಕು ಎಂದು ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಶನಿವಾರ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬದ ಆಚರಣೆ ಸಮಿತಿಯಿಂದ ನಡೆದ 80ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದಿನ ಯುವಕರು ದೇಶದ ಮೊದಲು ನಂತರ ನಾವು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಆಧುನಿಕ ಜೀವನಶೈಲಿ ಮತ್ತು ತಂತ್ರಜ್ಞಾನದ ನಡುವೆ ದೇಶದ ಬಗ್ಗೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ರಾಷ್ಟ್ರ ಅಭಿಮಾನ ಮೆರೆಯಬೇಕು ಎಂದರು.
ಶಾಸಕ ಕೆ.ಎಂ.ಉದಯ್ ಪೊಲೀಸ್ ತಂಡ ಹಾಗೂ ಶಾಲಾ ಮಕ್ಕಳಿಂದ ವಂದನೆ ಸ್ವೀಕರಿಸಿದರು. ಎಚ್.ಕೆ.ವೀರಣ್ಣಗೌಡ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎಸ್.ಸಂದೀಪ್ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಪಶು ವೈದ್ಯ ಡಾ.ಎ.ಎನ್.ರಾಘವೇಶ್, ನಾಟಿ ವೈದ್ಯ ಎಂ.ಎಚ್.ಬೋರೇಗೌಡ, ಸಮಾಜ ಸೇವಕರಾದ ಸಿದ್ದರಾಜು, ನಂಜುಂಡಯ್ಯ, ರಂಗಭೂಮಿ ಕಲಾವಿದರಾದ ಎಲ್.ಶಿವಕುಮಾರ್, ಪಂಚಲಿಂಗಯ್ಯ, ಮುಖ್ಯ ಶಿಕ್ಷಕ ಟಿ.ದೇವರಾಜು, ಕೃಷಿಕ ಕೆ.ಪುಟ್ಟಸ್ವಾಮಿ ಅವರುಗಳನ್ನು ಅಭಿನಂದಿಸಲಾಯಿತು.ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ಕ್ರೀಡಾಂಗಣದವರೆಗೆ ಭಾರತಮಾತೆಯ ಭಾವಚಿತ್ರದೊಂದಿಗೆ ವಿವಿಧ ಶಾಲಾ ಮಕ್ಕಳು ಆಕರ್ಷಕ ಪಧಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ, ನಗರಸಭೆ ಪೌರಾಯುಕ್ತೆ ಎಸ್.ಎನ್.ರಾಧಿಕಾ ಶಿವಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.