ಸಾರಾಂಶ
- ಶ್ರೀ ಸಾಯಿ ಗುರುಕುಲ ಸ್ಕೂಲ್‌ನಲ್ಲಿ ಶಾಲಾ-ಕಾಲೇಜುಗಳ 16ನೇ ವಾರ್ಷಿಕೋತ್ಸವ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ನೀತಿಯುಕ್ತ ಶಿಕ್ಷಣ ಇಲ್ಲದೇ ಇಂದು ಶಿಕ್ಷಣದ ಮೌಲ್ಯಗಳು ಕುಸಿಯುತ್ತಿವೆ ಎಂದು ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ- ಕಮ್ಮತ್ತಹಳ್ಳಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ನುಡಿದರು.ಪಟ್ಟಣದ ಹೊರವಲಯದ ಶ್ರೀ ಸಾಯಿ ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ 2ನೇ ದಿನದ ಶಾಲಾ-ಕಾಲೇಜುಗಳ 16ನೇ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣಕ್ಕೆ ಯಾವಾಗಲೂ ಮನ್ನಣೆ, ಗೌರವ ಇದೆ. ರಾಜನಾದವನಿಗೆ ಅವನ ವ್ಯಾಪ್ತಿಯಲ್ಲಿ ಗೌರವಾದರಗಳು ಲಭಿಸಿದರೆ, ಶಿಕ್ಷಣ ತಜ್ಞನಿಗೆ ವಿಶ್ವವ್ಯಾಪಿ ಗೌರವ ಸಿಗುತ್ತದೆ. ಶಿಕ್ಷಣಕ್ಕೆ ತನ್ನದೇ ಆದ ಅದ್ಭುತ ಶಕ್ತಿ ಇದೆ. ಸಾವಿರಾರು ವರ್ಷಗಳ ಐತಿಹ್ಯ ಹೊಂದಿರುವ ಭಾರತದ ಶಿಕ್ಷಣಕ್ಕೆ ಗುರುಕುಲ ಪದ್ಧತಿ ಶಿಕ್ಷಣವೇ ಮೂಲವಾಗಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷೆ ನೀಡುವಂತಿಲ್ಲ ಇದಕ್ಕೆ ಕಾರಣ ಸರ್ಕಾರದ ರೀತಿ, ನೀತಿಗಳು ಕಾರಣವಾಗಿವೆ. ಎಸ್ಸೆಸ್ಸೆಲ್ಸಿ ಶಿಕ್ಷಣ ಮುಗಿಸಿದ ಇಂದಿನ ಮಕ್ಕಳಿಗೆ ಕ್ರಮಬದ್ಧವಾಗಿ ಹಾಗೂ ವ್ಯಾಕರಣಬದ್ಧವಾಗಿ ಬರೆಯುವುದಕ್ಕೆ ಬರುತ್ತಿಲ್ಲ. ಇದರಿಂದ ಶುದ್ಧ ಬರಹವೇ ಮಾಯವಾಗಿದೆ. ಇದರ ಬಗ್ಗೆ ತುಲನಾತ್ಮಕ ಚಿಂತನೆಯ ಅಗತ್ಯ ಇದೆ. ವಿಜ್ಞಾನಿಗಳಾಗುವುದು ಸುಲಭವಾಗಿದ್ದು, ಸುಜ್ಞಾನಿಗಳಾಗುವುದು ಕಷ್ಟವಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಗುರುಕುಲ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ, ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಉನ್ನತ ಶಿಕ್ಷಣಕ್ಕೆ ಪಾದಾರ್ಪಣೆ ಮಾಡಿದ ಬಳಿಕವೂ ವಿದ್ಯಾರ್ಥಿಗಳ ವರ್ತನೆಯಲ್ಲಿ ಉತ್ತಮ ಬದಲಾವಣೆ ಆಗಬೇಕಿದೆ. ನಮ್ಮ ಸಂಸ್ಥೆಯ ಪ್ರತಿ ವರ್ಷದ ವಾರ್ಷಿಕೋತ್ಸವದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಜ್ಯೋತಿಪ್ರಧಾನ ಕಾರ್ಯಕ್ರಮದಲ್ಲಿ ಅಕ್ಷತೆಕಾಳು ತಲೆ ಮೇಲೆ ಹಾಕಿ ಶುಭ ಹಾರೈಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈ ವರ್ಷದ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿರುವ ಶ್ರೀಗಳು ಅಕ್ಷತೆಕಾಳು ಹಾಕುವ ಬದಲು, ಹೂಗಳನ್ನು ಹಾಕಿ ಆಶೀರ್ವದಿಸಿ ಎಂದು ಅಪ್ಪಣೆ ಕೊಡಿಸಿದರು. ಆದ್ದರಿಂದ ಈ ವರ್ಷದಿಂದಲೇ ಹೂ ಹಾಕುವ ಪದ್ಧತಿ ಅನುಕರಣೆ ಮಾಡಲಾಗುವುದು ಎಂದರು.
ಖೋ ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ 14 ವರ್ಷದೊಳಗಿನ ಮತ್ತು 17 ವರ್ಷದ ವಿದ್ಯಾರ್ಥಿನಿಯರನ್ನು, ಜೆಇಇ, ನೀಟ್ ವಿಭಾಗದಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದ ಮತ್ತು ಪ್ರತಿಭಾನ್ವಿತ ವಿದ್ಯಾಥಿಗಳನ್ನು ಪುರಸ್ಕರಿಸಲಾಯಿತು.ಕಾರ್ಯದರ್ಶಿ ಪಿ.ಸೌಮ್ಯ ಪ್ರದೀಪ್ ಗೌಡ, ಸಂಸ್ಥೆ ಉಪಾಧ್ಯಕ್ಷ ಶಂಕರಪ್ಪ ಗೌಡ, ಖಜಾಂಚಿ ಡಿ.ಜಿ. ಸೋಮಪ್ಪ, ಆಡಳಿತಾಧಿಕಾರಿ ಡಿ.ಎಸ್. ಅರುಣ್‌ಕುಮಾರ್, ನಿರ್ದೇಶಕಿ ಗೌರಮ್ಮ, ಶಾಲಾಭಿವೃದ್ಧಿ ಸಮಿತಿಯ ಡಿ.ಎಸ್.ಪ್ರದೀಪ್ ಗೌಡ, ಪ್ರಾಂಶುಪಾಲ ಸಿ.ಜಿ.ಸುರೇಂದ್ರ, ಶಿಕ್ಷಣ ಸಂಯೋಜಕ ಎ.ಜಿ.ಹರೀಶ್‌ಕುಮಾರ್, ಶಿಕ್ಷಕರಾದ ಮಧುಕುಮಾರ್, ತಿಪ್ಪೇಸ್ವಾಮಿ, ಹರೀಶ್‌ರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.
- - - -13ಎಚ್.ಎಲ್.ಐ3:ಶ್ರೀ ಸಾಯಿ ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ನಡೆದ 16ನೇ ವಾರ್ಷಿಕೋತ್ಸವದಲ್ಲಿ ಶ್ರೀ ಗುರುಬಸವ ಸ್ವಾಮೀಜಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.