ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ನಮಗೆ ಅನ್ನ ಕೊಡುವ ರೈತ ಹಾಗೂ ದೇಶದ ಗಡಿ ಕಾಯುವ ಯೋಧ ದೇಶದ ಎರಡು ಕಣ್ಣುಗಳು, ಈ ಎರಡು ಕಣ್ಣುಗಳ ರೆಪ್ಪೆಯಂತೆ ರಕ್ಷಿಸಿಕೊಂಡು ಗೌರವಿಸಬೇಕು ಎಂದು ಬಸವಾಪಟ್ಟಣ ವೃದ್ಧಾಶ್ರಮದ ಕೃಷ್ಣಾನಂದ ಭಾರತೀ ಸ್ವಾಮೀಜಿ ಹೇಳಿದರು.ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಮಾಯಾಂಬಿಕಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಶನಿವಾರ ಏರ್ಪಡಿಸಿದ 8ನೇ ವರ್ಷದ ಭರತ ಹುಣ್ಣಿಮೆ ಪ್ರಯುಕ್ತ ಮಾಯಾಂಬಿಕಾ ದೇವಿಯ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ನಿವೃತ್ತ ಯೋಧರಿಗೆ ಏರ್ಪಡಿಸಿದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಚೀನಾ, ಪಾಕಿಸ್ತಾನ ವಿರುದ್ಧ ಹೋರಾಡುವಾಗ ಭಾರತೀಯ ಯೋಧರು ತಮ್ಮ ಪ್ರಾಣ ಒತ್ತೆ ಇಟ್ಟು ದೇಶ ರಕ್ಷಣೆಗಾಗಿ ಹೋರಾಡಿದ ಯೋಧರ ನಾವು ಗೌರವಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಕಾರಣಿಗಳು ಪರಸ್ಪರ ಟೀಕಿಸಿ ಅಧಿಕಾರಕ್ಕೆ ಬರುವ ಬಗ್ಗೆ ಯೋಚಿಸುತ್ತಾರೆ, ಆದರೆ ಯೋಧರು ಅಥವಾ ರೈತರಾಗಲಿ ಯಾವುದೇ ಆಸೆ, ಆಮಿಷಕ್ಕೆ ಒಳಪಡದೇ ಅನ್ನ ನೀಡುವ ರೈತ ಹಾಗೂ ದೇಶ ರಕ್ಷಿಸುವ ಯೋಧರು ನಮ್ಮ ನಿಜವಾದ ಹೀರೋಗಳು ಅವರ ನಾವು ಸ್ಮರಿಸಲೇಬೇಕು. ಸಿನಿಮಾ ನಾಯಕರ ಅನುಸರಿಸುವ ಮಕ್ಕಳು ಯೋಧರ ಹಾಗೂ ರೈತರ ಅನುಸರಿಸದಿರುವುದು ದುರಂತವೇ ಸರಿ. ಈಗಲಾದರೂ ಪೋಷಕರು ಎಚ್ಚೆತ್ತು ಸಣ್ಣ ವಯಸ್ಸಿನಲ್ಲೇ ದೇಶಭಕ್ತಿ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.ಕಾಂಗ್ರೆಸ್ ಮುಖಂಡ ಕೆಂಗಲಹಳ್ಳಿ ಷಣ್ಮುಖಪ್ಪ ಮಾತನಾಡಿ, ನಮ್ಮ ಹೋಬಳಿಯಲ್ಲಿ ಎಲ್ಲಾ ಪಕ್ಷಗಳಲ್ಲೂ ಸಕ್ರಿಯವಾಗಿದ್ದರೂ ಗ್ರಾಮದ ವಿಚಾರ ಬಂದ ಕೂಡಲೇ ಎಲ್ಲರೂ ಒಂದಾಗಿ ಗ್ರಾಮದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಇದು ಗ್ರಾಮಾಭಿವೃದ್ಧಿ ಬಗೆಗಿನ ಬದ್ಧತೆ ತೋರಿಸುತ್ತದೆ. ಆದ್ದರಿಂದಲೇ ಗ್ರಾಮದಲ್ಲಿ ಅನೇಕ ಅಭಿವೃದ್ಧಿಗಳು ನಡೆದಿವೆ ಎಂದರು.
ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ ಮಾತನಾಡಿ, ಯೋಧರ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ನಮ್ಮೆಲ್ಲರಿಗೂ ಮಾದರಿ. ಗ್ರಾಮದವರೆಲ್ಲರೂ ಒಟ್ಟಾಗಿ ಧಾರ್ಮಿಕ, ಸಾಮಾಜಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಗ್ರಾಮದವರು ರಾಜ್ಯಕ್ಕೆ ಮಾದರಿ ಎಂದರು.ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ವಾಸಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಕಾಂಗ್ರೆಸ್ ಮುಖಂಡರಾದ ಎಚ್.ಎ.ಉಮಾಪತಿ, ಮರುಳ ಸಿದ್ದಪ್ಪ, ದಯಾನಂದ್, ಎಂ.ಎಸ್.ಪಾಲಕ್ಷಪ್ಪ, ಯೋಧರಾದ ರವಿಕುಮಾರ, ಶಿವಕುಮಾರ್, ಮಂಜಪ್ಪ, ಹನುಮಂತಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಂಗಮ್ಮ ಬಸವರಾಜಪ್ಪ, ಸಮಿತಿ ಅಧ್ಯಕ್ಷ ಎಂ.ಕೆ. ಪರಮೇಶ್ವರಪ್ಪ, ಸಮಿತಿ ಸದಸ್ಯರಾದ ರಂಗಪ್ಪ, ಶಂಭುಲಿಂಗಪ್ಪ, ನಿಂಗಪ್ಪ, ಸತೀಶ್, ಬಸವರಾಜ್, ಅಶೋಕ್, ಶಿವಪ್ರಕಾಶ್, ರುದ್ರಪ್ಪ, ತಿಪ್ಪೇಶ್ ಸೇರಿ ಅನೇಕರಿದ್ದರು.