ರೈತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾತ್ಯತೀತ, ಪಕ್ಷಾತೀತ, ಕಾನೂನಾತ್ಮಕ ಮತ್ತು ವಿಷಯಾಧಾರಿತ ನಿಲುವಿನೊಂದಿಗೆ ಕಡಬ ತಾಲೂಕು ಕಚೇರಿ ಬಳಿ ಮಂಗಳವಾರ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.

ಉಪ್ಪಿನಂಗಡಿ: ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕಾನೂನು ಅನುಷ್ಠಾನ ಮಾಡುವಾಗ ಜನರ ಅಭಿಪ್ರಾಯ ಸಂಗ್ರಹಿಸಿ ಭಯದ ವಾತವರಣದಲ್ಲಿ ಬದುಕುವ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ತಕ್ಷಣ ರಾಜ್ಯದ ಕಂದಾಯ , ಅರಣ್ಯ ಇಲಾಖಾ ಸಚಿವರು ಜಿಲ್ಲೆಗೆ ಆಗಮಿಸಿ ರೈತರು ಅಧಿಕಾರಿಗಳ ಜೊತೆಯಾಗಿ ಸಂವಾದ ನಡೆಸಿ ಜಂಟಿ ಸರ್ವೆ ನಡೆಸಿದ ಬಳಿಕ ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನು ರೂಪಿಸಿ ಅನುಷ್ಠಾನ ಮಾಡಬೇಕು. ರೈತರ ಕಾನೂನು ಹೋರಾಟಕ್ಕೆ ಸದಾ ಬೆಂಬಲವಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾತ್ಯತೀತ, ಪಕ್ಷಾತೀತ, ಕಾನೂನಾತ್ಮಕ ಮತ್ತು ವಿಷಯಾಧಾರಿತ ನಿಲುವಿನೊಂದಿಗೆ ಕಡಬ ತಾಲೂಕು ಕಚೇರಿ ಬಳಿ ಮಂಗಳವಾರ ನಡೆದ ಬೃಹತ್ ಹ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕಂದಾಯ ಮತ್ತು ಅರಣ್ಯ ಇಲಾಖೆಯ ಕಾನೂನು ಅನುಷ್ಠಾನದಿಂದ ಮಲೆನಾಡು ರೈತರು ಭಯದಿಂದ ಜೀವನ ಸಾಗಿಸುವಂತಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು. ರಾಜ್ಯ ಸರ್ಕಾರ ತಕ್ಷಣ ರೈತರ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ಕಡಬ, ಸುಳ್ಯ, ಪುತ್ತೂರು ತಾಲೂಕು ಹೋರಾಟ ಮಾಡಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದಾಗಿ ರೈತರು ಭಯದ ವಾತವರಣದಲ್ಲಿ ಜೀವನ ಸಾಗಿಸುವಂತಾಗಿದೆ. ರೈತರ ಭೂಮಿ ಕಸಿದುಕೊಂಡು ಅರಣ್ಯ ಭೂಮಿ ಹೆಚ್ಚಿಸುವ ಹುನ್ನಾರ ನಡೆಯುತ್ತಿದೆ ಎಂದರು. ಪ್ರಗತಿಪರ ಕೃಷಿಕ ಕೃಷ್ಣ ಭಟ್ ಸಭೆ ಉದ್ಘಾಟಿಸಿದರು. ರಾಜಕೀಯ ಮುಖಂಡರಾದ ಸಯ್ಯದ್ ಮೀರಾ ಸಾಹೇಬ್, ಜಾಕೆ ಮಾದವ ಗೌಡ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಪ್ರಸನ್ನ ದರ್ಬೆ , ಒಕ್ಕಲಿಗ ಸೇವಾ ಸಂಘ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಗೌಡ , ಕುಟ್ರುಪ್ಪಾಡಿ ಗ್ರಾ.ಪಂ ಸದಸ್ಯ ಮಹಮ್ಮದ್ ಅಲಿ, ಐತ್ತೂರು ಗ್ರಾ.ಪಂ ಸದಸ್ಯ ಹೀರೇಶ್ ಗೌಡ, ನ್ಯಾಯವಾದಿ ಲೋಕೇಶ್ ಕೊಣಾಜೆ ಮತ್ತಿತರರು ಮಾತನಾಡಿದರು.ರಮಾನಂದ ಎಣ್ಣೆಮಜಲು ಸ್ವಾಗತಿಸಿ ವಂದಿಸಿದರು. ಅಕ್ಷತಾ ಕೋಡಿಂಬಾಳ, ದಾಮೋದರ ಗುಂಡ್ಯ, ವಿನಯ ನಿರೂಪಿಸಿದರು. ಸಭೆಯ ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಮಲೆನಾಡು ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕಡಬ ತಹಸೀಲ್ದಾರ್‌ ಮೂಲಕ ಪ್ರಭಾಕರ ಖಜೂರೆ ಮತ್ತು ಅರಣ್ಯ ಇಲಾಖಾಅಧಿಕಾರಿ ವಿಮಲ್ ಬಾಬು ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.