ಪುಡಾ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅಧಿಕಾರ ಸ್ವೀಕಾರ

| Published : Mar 16 2025, 01:50 AM IST

ಸಾರಾಂಶ

ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ನೂತನ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡಿರುವ ಕೆಪಿಸಿಸಿ ವಕ್ತಾರ ಹಾಗೂ ಮಾನವ ಬಂಧುತ್ವ ವೇದಿಕೆ ಪುತ್ತೂರು ತಾಲೂಕು ಘಟಕದ ಸಂಚಾಲಕರಾದ ಅಮಳ ರಾಮಚಂದ್ರ ಶನಿವಾರ ಬೆಳಗ್ಗೆ ಪುತ್ತೂರಿನ ಪುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ನೂತನ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡಿರುವ ಕೆಪಿಸಿಸಿ ವಕ್ತಾರ ಹಾಗೂ ಮಾನವ ಬಂಧುತ್ವ ವೇದಿಕೆ ಪುತ್ತೂರು ತಾಲೂಕು ಘಟಕದ ಸಂಚಾಲಕರಾದ ಅಮಳ ರಾಮಚಂದ್ರ ಶನಿವಾರ ಬೆಳಗ್ಗೆ ಪುತ್ತೂರಿನ ಪುಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಅವರು ಕೃಷಿಕರಾಗಿದ್ದು, ಸಜ್ಜನ ವ್ಯಕ್ತಿತ್ವ, ಬಡವರ ಬಗ್ಗೆ ಕಾಳಜಿ ಹಾಗೂ ಎಲ್ಲ ಅರಿವು ಹೊಂದಿದ್ದಾರೆ. ಅಧ್ಯಕ್ಷರು ಭ್ರಷ್ಟಾಚಾರ ರಹಿತವಾಗಿ ಬಡವರ ಪರವಾಗಿ ಕರ್ತವ್ಯ ನಿರ್ವಹಿಸಬೇಕು. ಜನರ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕೆಲಸವಾಗಬೇಕು. ಯಾವುದೇ ಅರ್ಜಿಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಪುಡಾ ಕಚೇರಿಯಲ್ಲಿ ಉಳಿಯಬಾರದು. ವಾರದಲ್ಲಿ ಎರಡು ದಿನ ಮಾತ್ರ ಇಲ್ಲಿಗೆ ಅಧಿಕಾರಿಗಳು ಬರುತ್ತಿದ್ದು, ಉಳಿದ ದಿನಗಳಲ್ಲಿ ಸದಸ್ಯರ ಮುಖಾಂತರ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಅಧಿಕಾರ ಸ್ವೀಕರಿಸಿದ ಅಮಳ ರಾಮಚಂದ್ರ ಮಾತನಾಡಿ, ಬಡವರ, ಅಶಕ್ತರ ಕೆಲಸಗಳನ್ನು ನಡೆಸುವಂತೆ ಶಾಸಕರು ಕಿವಿಮಾತು ಹೇಳಿದ್ದು, ಅವರ ಮಾತಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ತನ್ನ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಆಗದಂತೆ ಶೇ.೧೦೦ರಷ್ಟು ಬದ್ಧವಾಗಿ ಅಧಿಕಾರ ನಡೆಸಲಿದ್ದೇನೆ. ಪುತ್ತೂರಿನ ಜನತೆ ಏನನ್ನು ಬಯಸುತ್ತಾರೆಯೋ ಅದನ್ನು ಈಡೇರಿಸಲಾಗುವುದು ಎಂದರು.ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಾಜಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಧಾರ್ಮಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು.