ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ

| Published : Jan 03 2024, 01:45 AM IST

ಸಾರಾಂಶ

ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ: ಗುರುನಾಥಸ್ವಾಮಿ ಮಹಾಪುರುಷರು

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಶಿಲ್ಪಕಲೆಯಲ್ಲಿ ಅಪಾರವಾದ ಆಸಕ್ತಿ ಹೊಂದಿ, ಅದಕ್ಕಾಗಿಯೇ ತಮ್ಮ ಇಡೀ ಬದುಕನ್ನು ಮೀಸಲಾಗಿರಿಸಿದ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ ಎಂದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಪೂಜ್ಯಶ್ರೀ ಗುರುನಾಥಸ್ವಾಮಿ ಮಹಾಪುರುಷರು ಹೇಳಿದರು.

ಅವರು ಸೋಮವಾರ ತಾಲೂಕು ಆಡಳಿತ ಹಾಗೂ ತಾಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿ ನಾಡಿನ ಹಲವಾರು ಕಡೆಗಳಲ್ಲಿ ಶಿಲ್ಪ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ದೇಶದಲ್ಲಿ ವಿಶ್ವಕರ್ಮ ಸಮಾಜವು ವಾಸ್ತುಶಿಲ್ಪಕಲೆ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಯುವ ಪೀಳಿಗೆ ಅಮರಶಿಲ್ಪಿ ಜಕಣಾಚಾರಿ ಅವರ ಕಲಾತ್ಮಕ ಬದುಕನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಉಜ್ವಲವಾಗುತ್ತದೆ ಎಂದು ಹೇಳಿದರು.

ತಹಸೀಲ್ದಾರ್ ಮಂಗಳಾ ಎಂ. ಅವರು ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರು ಅನೇಕ ಶಿಲ್ಪ ದೇವಾಲಯಗಳನ್ನು ನಿರ್ಮಿಸಿ ದೇವಶಿಲ್ಪಿಗಳಾಗಿ ಹೆಸರು ಮಾಡಿದ್ದಾರೆ. ಇಂತಹ ಮಹಾತ್ಮರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಅಖಿಲ ಭಾರತ ವಿಶ್ವಕರ್ಮ ಪರಿಷತ್ ಜಿಲ್ಲಾಧ್ಯಕ್ಷ ಅಖಂಡೇಶ್ವರ ಎಂ.ಪತ್ತಾರ ಮಾತನಾಡಿ, ಅಮರಶಿಲ್ಪಿ ಜಕನಾಚಾರಿ ಅವರು ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ಅವರು ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ಶಿಲ್ಪ ದೇವಾಲಯಗಳನ್ನು ನಿರ್ಮಿಸುವ ಮೂಲಕ ನಮ್ಮ ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅರಸರ ಕಾಲದಲ್ಲಿ ಶಿಲ್ಪಕಲೆಯು ಉತ್ತುಂಗ ಶಿಖರದಲ್ಲಿತ್ತೆಂದು ಹೇಳಿದರು.

ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶಂ. ಬಡಿಗೇರ ಅಧ್ಯಕ್ಷತೆವಹಿಸಿದ್ದರು. ಪುಂಡಲೀಕ ಬಡಿಗೇರ ಮಾತನಾಡಿದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ವೀರೇಶ ಬಡಿಗೇರ, ಸಿಬ್ಬಂದಿ ಎಂ.ಎಂ.ತುಪ್ಪದ, ತಾಲೂಕು ಸಂಘದ ಗೌರವಾಧ್ಯಕ್ಷ, ಮಾಜಿ ಸೈನಿಕ ಸುಭಾಸ ಬಡಿಗೇರ, ಉಪಾಧ್ಯಕ್ಷ ತೆಗ್ಗಿ ಮಾನಪ್ಪ ಬಡಿಗೇರ, ಅಶೋಕ ಬಡಿಗೇರ, ನೀಲಪ್ಪ ಬಡಿಗೇರ, ಕಟಗೇರಿ ಲಚ್ಚಪ್ಪ ಕಂಬಾರ, ಹಂಸನೂರ ಈರಪ್ಪ ಬಡಿಗೇರ, ತಿಮ್ಮಸಾಗರ ಚಿದಾನಂದ ಬಡಿಗೇರ, ತರುಣ ಸಂಘದ ಅಧ್ಯಕ್ಷ ರಂಗಪ್ಪ ಬಡಿಗೇರ, ಮನೋಹರ ಪತ್ತಾರ, ಯಮನಪ್ಪ ಬಡಿಗೇರ, ಸುಭಾಸ ಬಡಿಗೇರ, ತಾಲೂಕು ಮಹಿಳಾ ಮಂಡಳದ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಬಡಿಗೇರ, ಕಾರ್ಯದರ್ಶಿ ಕಾಳವ್ವ ಬಡಿಗೇರ ಹಾಗೂ ಮಂಗಳಗುಡ್ಡ ಗ್ರಾಮದ ಸಮಾಜದ ಹಿರಿಯರು ಪಾಲ್ಗೊಂಡಿದ್ದರು.