ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಚಿಕ್ಕೋನಹಳ್ಳಿ ಗೇಟ್‌ನಲ್ಲಿರುವ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆ 2002ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಚನ್ನರಾಯಪಟ್ಟಣದ ನಂದಗೋಕುಲ ಹೋಟೆಲ್‌ನಲ್ಲಿ 2002ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದರು. ಗುರುವಂದನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್ ಡಿ ಪರಮಶಿವಯ್ಯ, ಗುರು ಶಿಷ್ಯರ ಸಂಬಂಧ ಎಂದಿಗೂ ಕೊನೆಗೊಳ್ಳುವ ಬಾಂಧವ್ಯವಲ್ಲ. ಅದೊಂದು ಪವಿತ್ರವಾದ ಸಂಬಂಧವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಆಧುನಿಕತೆ ಬೆಳೆದಂತೆ ಎಲ್ಲವೂ ಬದಲಾಗುತ್ತಿದೆ. ಆದರೆ ಇವತ್ತಿನ ಇಂತಹ ಪರಿಸ್ಥಿತಿಯಲ್ಲಿ ಕಳೆದ 23 ವರ್ಷಗಳ ನಂತರ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಮೂಲಕ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸುವುದು ಖುಷಿ ತರಿಸಿದೆ. ಈ ಕಾರ್ಯಕ್ರಮ ಬೇರೆಯವರಿಗೂ ಪ್ರೇರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ನಿವೃತ್ತ ಶಿಕ್ಷಕ ವಿಎನ್ ಶೇಷಮೂರ್ತಿ ಮಾತನಾಡಿ, ಶಾಲೆಯ 2002- 03ನೇ ಸಾಲಿನ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅವತ್ತಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಬಡತನವಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲೆಂದು ಜನರು ಕೂಲಿ ಮಾಡಿ ಓದಿಸುತ್ತಿದ್ದರು. ಇನ್ನು ಅನೇಕ ವಿದ್ಯಾರ್ಥಿಗಳು 8ರಿಂದ 10 ಕಿ.ಮೀ. ದೂರದಿಂದ ಶಾಲೆಗೆ ಆರ್ಥಿಕವಾಗಿ ಚೆನ್ನಾಗಿರುವ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಬರುತ್ತಿದ್ದರು. ಇನ್ನೂ ಕೆಲವರು ನಡೆದುಕೊಂಡು ಬರುತ್ತಿದ್ದರು. ಶಾಲೆಯಲ್ಲೂ ಕೂಡ ಶಿಕ್ಷಕರಿಗೆ ಹೆಚ್ಚಿನ ಗೌರವ ಕೊಡುವ ಮೂಲಕ ಓದಿನ ಕಡೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರ ಈ ಪರಿಶ್ರಮದಿಂದಲೇ ಈಗ ವಿವಿಧ ರಂಗಗಳಲ್ಲಿ ಹೆಚ್ಚು ಹೆಸರು ಮಾಡಲು ಸಾಧ್ಯವಾಗಿದೆ ಎಂದರು.ನಿವೃತ್ತ ಶಿಕ್ಷಕ ವಿ ಮಲ್ಲಿಕಾರ್ಜುನಯ್ಯ ಮಾತನಾಡಿ, ಸದ್ಯ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆಯನ್ನು ಅನೇಕ ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚಲಾಗಿದ್ದು, ಈ ಶಾಲೆಯನ್ನು ಪುನರ್ ಪ್ರಾರಂಭಿಸಲು ಎಲ್ಲಾ ಹಳೇ ವಿದ್ಯಾರ್ಥಿಗಳು ಒಗ್ಗೂಡಿ ಶ್ರಮಿಸಿದರೆ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದರು.ವಿಭಿನ್ನ ಕಾರ್ಯಕ್ರಮ ಆಯೋಜನೆ:
ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರತಿ ಶಿಕ್ಷಕರನ್ನು ಮಾತನಾಡಿಸಿ ಅವರ ಸಲಹೆ ಮಾರ್ಗದರ್ಶನದ ಜೊತೆಗೆ ನಿವೃತ್ತಿಯ ಜೀವನದ ನಂತರ ಅವರು ಯಾವ ರೀತಿ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮುಂಬರುವ ದಿನಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ಪಡೆಯಲಾಯಿತು. ನಂತರ ನೆಚ್ಚಿನ ಶಿಕ್ಷಕರಾದ ಎಚ್ ಎಮ್ ಪರಮಶಿವಯ್ಯ, ವಿಎನ್ ಶೇಷಮೂರ್ತಿ, ವಿ ಮಲ್ಲಿಕಾರ್ಜುನಯ್ಯ, ಟಿ ಬಿ ಲಿಂಗದೇವರು, ಎಂ ಎಚ್ ಬೋರೇಗೌಡ, ವೈಎನ್ ಮಲ್ಲೇಶ್, ಎನ್ಎಸ್ ಸಣ್ಣ ನಂಜಪ್ಪ, ಎನ್‌ಸಿ ರುದ್ರಚಾರ್, ನಾಗರಾಜು, ಮೂರ್ತಿ, ಅವರನ್ನು ಹಳೆ ವಿದ್ಯಾರ್ಥಿಗಳು ಹೃದಯಪೂರ್ವಕವಾಗಿ ಸನ್ಮಾನಿಸಿದರು. ಹಳೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ರುದ್ರೇಶ್, ಗಂಗೆಗೌಡ, ಲೋಕೇಶ್, ಸೋಮಶೇಖರ್, ಗಾಯತ್ರಿ, ಕೆಂಪ, ನವೀನ್ ( ಬೈರಾಪುರ ), ಶೋಭಾ, ಉಷಾದೇವಿ, ಜ್ಯೋತಿ, ಸೇರದಂತೆ 2002ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.