ಸಿಂಧನೂರು ದಸರಾ ಉತ್ಸವದ ಕೊನೆಯ ದಿನವಾದ ಬುಧವಾರ ಜಂಬೂ ಸವಾರಿ ಸಿದ್ದಪರ್ವತ ಅಂಬಾಮಠದ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಜಂಬೂ ಸವಾರಿಯ ವೈಭವದ ಮೆರವಣಿಗೆ ಸಂಜೆ ಜರುಗಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಿಂಧನೂರು ದಸರಾ ಉತ್ಸವದ ಕೊನೆಯ ದಿನವಾದ ಬುಧವಾರ ಜಂಬೂ ಸವಾರಿ ಸಿದ್ದಪರ್ವತ ಅಂಬಾಮಠದ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಜಂಬೂ ಸವಾರಿಯ ವೈಭವದ ಮೆರವಣಿಗೆ ಸಂಜೆ ಜರುಗಿತು.ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿರುವ ಗಾಂಧಿ ವೃತ್ತದಲ್ಲಿ ಅಲಂಕೃತಗೊಂಡಿದ್ದ ಆನೆಯ ಮೇಲಿನ ಅಂಬಾರಿಯಲ್ಲಿದ್ದ ಅಂಬಾದೇವಿ ಮೂರ್ತಿಗೆ ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ರೌಡಕುಂದಿಯ ಸಿದ್ದರಾಮೇಶ್ವರ ಶರಣರು, ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಮತ್ತಿತರ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಸಿಂಧನೂರು ಜಂಬೂ ಸವಾರಿಗೆ ಚಾಲನೆ ನೀಡಿದರು.ಅಲಬನೂರು ಅಮರಯ್ಯ ಸ್ವಾಮಿ ಪೂಜೆ ಸಲ್ಲಿಸಿದರು. ನೂರಾರು ಮಹಿಳೆಯರು ಕುಂಭ-ಕಳಸಗಳನ್ನು ಹಿಡಿದು, ವೀರಗಾಸೆ ನೃತ್ಯ, ಹಲಗೆ ಮೇಳ, ಚಿಲಿಪಿಲಿಗೊಂಬೆ, ಕೀಲು ಕುದುರೆ, ಲಂಬಾಣಿ ನೃತ್ಯ, ಡೊಳ್ಳಿನ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಈ ಬಾರಿ ವಿಶೇಷವಾಗಿ ಪುಣೆಯ 150 ಜನ ಮಹಿಳಾ ತಂಡದ ಡೊಳ್ಳು ಕುಣಿತ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಜೊತೆಗೆ ಅಂಬಾಮಠದ ಅಂಬಾದೇವಿ ದೇವಸ್ಥಾನದ ನೂತನ ವಿನ್ಯಾಸದ ಕಲಾಕೃತಿ, ಸಿಂಹದ ಮೇಲೆ ಕುಳಿತ ಅಂಬಾದೇವಿ ಮೂರ್ತಿ, ಕಾಳಿ ಮಾತೆ, ಬಸವಣ್ಣ, ಅಲ್ಲಮ್ಮಪ್ರಭು, ಹಡಪದ ಅಪ್ಪಣ್ಣ, ಸರ್ವಜ್ಞ, ಅಕ್ಕಮಹಾದೇವಿ, ವೀರರಾಣಿ ಕಿತ್ತೂರು ಚನ್ನಮ್ಮ, ಮಹಾತ್ಮಗಾಂಧಿ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶಿವಲಿಂಗ ಸೇರಿದಂತೆ ವಿವಿಧ ದಾರ್ಶನಿಕರ ಸ್ತಬ್ದಚಿತ್ರಗಳು ನೋಡುಗರ ಕಣ್ಮನ ಸೆಳೆದವು.
ಅಂಬಾರಿಯಲ್ಲಿ ಅಂಬಾದೇವಿ ಮೂರ್ತಿಯನ್ನು ಹೊತ್ತಿದ್ದ ಜಂಬೂ ಸವಾರಿ ಮಹಾತ್ಮಗಾಂಧಿ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ನಟರಾಜ್ ಕಾಲೊನಿ ರಸ್ತೆ, ಟಿಪ್ಪುಸುಲ್ತಾನ್ ಸರ್ಕಲ್, ಬಡಿಬೇಸ್, ಹಳೆಬಜಾರ್ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಕನಕದಾಸ ವೃತ್ತದವರೆಗೆ ಸಾಗಿ ಬಂದಿತು. ಇದೇ ವೇಳೆ ಸುಕಾಲಪೇಟೆ ರಸ್ತೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ತಹಸೀಲ್ದಾರ್ ಅರುಣ ಹೆಚ್.ದೇಸಾಯಿ ಅವರು ಬನ್ನಿಮಹಾಂಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬನ್ನಿ ಹರಿದುಕೊಂಡು ಬಂದ ಭಕ್ತರ ತಂಡ ಪುನಃ ಜಂಬೂ ಸವಾರಿ ಮೆರವಣಿಗೆಯೊಂದಿಗೆ ತಹಸೀಲ್ದಾರ್ ಕಚೇರಿಯನ್ನು ತಲುಪಿತು. ಈ ಮೆರವಣಿಗೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ವಿವಿಧ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.