ಮಳೆಗೆ ಅಂಬಳಿ ಶಾಲೆ ಜಲಾವೃತ ಕ್ರಮಕ್ಕೆ ಆಗ್ರಹ

| Published : May 23 2024, 01:08 AM IST / Updated: May 23 2024, 01:09 AM IST

ಸಾರಾಂಶ

ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಈ ಬಗೆಯ ಅವಾಂತರ ಉಂಟಾಗುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ.

ಕೊಟ್ಟೂರು: ಇನ್ನೇನು ಕೆಲವೇ ದಿನಗಳಲ್ಲಿ ಶಾಲೆ ಆರಂಭ ಆಗಲಿದೆ. ಆದರೆ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಸರಿಪಡಿಸುವ ಕಾರ್ಯ ಇನ್ನು ನಡೆಯುತ್ತಿಲ್ಲ. ಇದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ವೇದನೆ ತರಿಸಿದೆ.

ತಾಲೂಕಿನ ಅಂಬಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊನ್ನೆ ಸುರಿದ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಆವರಣದುದ್ದಕ್ಕೂ ಎರಡು ಅಡಿ ನೀರು ನಿಂತುಕೊಂಡಿದೆ.

ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಈ ಬಗೆಯ ಅವಾಂತರ ಉಂಟಾಗುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಇಂತಹ ಪರಿಸ್ಥಿಯಲ್ಲಿ ಈ ಶಾಲೆ 1-7ನೇ ತರಗತಿ ಹೊಂದಿದ್ದು, 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದೆಲ್ಲ ಸಮಸ್ಯೆಗಳಿಗಿಂತ ಮಳೆ ಬಂದಾಗ ಜಲಾವೃತ ಆಗುವುದು ದೊಡ್ಡ ಸಮಸ್ಯೆ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಸುಲಲಿತವಾಗಿ ಮನೆಗೆ ವಾಪಸ್ ಬರುತ್ತಾರೆಂಬ ನಿರೀಕ್ಷೆ ಹೊಂದಿರುತ್ತಾರೆ. ಮಳೆ ಬಂದರಂತೂ ಪೋಷಕರ ಗಮನ ಇಡೀ ಶಾಲೆಯ ಕಡೆಗೆ ಇರುತ್ತದೆ.

ಮಳೆ ನೀರಿನೊಂದಿಗೆ ವಿಷಪೂರಿತ ಹುಳುಗಳು ಮತ್ತಿತರ ಪ್ರಾಣಿ ಪಕ್ಷಿಗಳು ಬಂದು ಸೇರಿಕೊಳ್ಳುತ್ತಿವೆ. ಸ್ವಲ್ಪ ಅಲಕ್ಷ್ಯ ವಹಿಸಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಸಂಬಂಧಪಟ್ಟವರಿಗೆ ಗ್ರಾಮಸ್ಥರು ದೂರಿದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಾರೆ.

ಶಾಲೆ ಆರಂಭವಾಗುವ ವೇಳೆಗಾದರೂ ಶಾಲೆಯ ಆವರಣದಲ್ಲಿ ನೀರು ನಿಲ್ಲದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.