ಸಾರಾಂಶ
ರಟ್ಟೀಹಳ್ಳಿ: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಮಾತ್ರವಲ್ಲದೇ, ನ್ಯಾಯಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ ಎಂದು ರಟ್ಟೀಹಳ್ಳಿ ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ ಗಾಜೇರ ಹೇಳಿದರು.
ಪಟ್ಟಣದ ಪ್ರೇಮಾನಂದಗಿರಿ ಮಹಾಸ್ವಾಮಿಗಳ ಗದ್ದುಗೆ ಆವರಣದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಹಣ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದ ಅಂದಿನ ದಿನಗಳಲ್ಲಿ ತಮ್ಮ ಜೀವದ ಹಂಗು ತೊರೆದು, ಸಮಾಜ ಸುಧಾರಣೆಗಾಗಿ ಹೋರಾಡಿದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಜನ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.ಸಮಾಜದಲ್ಲಿನ ತಾರತಮ್ಯ, ಜಾತಿ ಪದ್ಧತಿ, ತಾವು ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಬಾಧಿಸಬಾರದು ಎಂಬ ಉದ್ದೇಶದಿಂದ ನಿರಂತರ ಅಧ್ಯಯನ ಮಾಡಿ, ಪ್ರತಿಯೊಬ್ಬರ ಹಕ್ಕು ರಕ್ಷಣೆ ಮಾಡುವ ಸಂವಿಧಾನ ರೂಪಿಸಿದರು. ಈ ನೆಲದ ಪ್ರತಿಯೊಂದು ವಿಚಾರಗಳ ಬಗ್ಗೆ ಅವರು ದೂರದೃಷ್ಟಿಯುಳ್ಳವರಾಗಿದ್ದರು. ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಅವರು, ಡಿ. 6, 1956ರಂದು ದೇಹತ್ಯಾಗ ಮಾಡಿದರು. ಅವರ ಜೀವನಶೈಲಿ ನಮಗೆ ದಾರಿದೀಪವಾಗಿದೆ ಎಂದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ ನಾಗಣ್ಣನವರ ಮಾತನಾಡಿ, ಅಂಬೇಡ್ಕರ್ ಅವರು ಡಿ. 6ರಂದು ದೇಹತ್ಯಾಗ ಮಾಡಿದ ದಿನವನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸಲಾಗುತ್ತಿದೆ. ಡಾ. ಅಂಬೇಡ್ಕರ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಈ ದಿನವಾದರೆ ಸಾಲದು, ನಮ್ಮ ನಿತ್ಯದ ಬದುಕಿನಲ್ಲಿರಬೇಕು ಎಂದರು.ಡಾ. ಅಂಬೇಡ್ಕರ್ ಅವರು ಕಷ್ಟದ ದಿನಗಳನ್ನು ಅನುಭವಿಸಿ, ಅನೇಕ ಪದವಿಗಳನ್ನು ಪಡೆದು, ಸಮಾಜದಲ್ಲಿನ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಕ್ಕಳು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಬಿಜೆಪಿ ಮುಖಂಡ ಶಂಕರಗೌಡ ಚನ್ನಗೌಡ್ರ, ಕುಮಾರ ದ್ಯಾವಣ್ಣನವರ, ಚಿದಾನಂದ ಮಣೆ, ಶಿವು ದ್ಯಾವಕ್ಕಳವರ, ನಾಗರಾಜ ನಡುವಿನಮನಿ, ರಮೇಶ ಸೊರಟೂರ, ಬಸವರಾಜ ಕಟ್ಟಿಮನಿ, ಬಸವರಾಜ ಗಬ್ಬೂರ, ಹನುಮಂತಪ್ಪ ಮೇಗಳಮನಿ, ರಾಜಣ್ಣ ಕಳಕ್ಕನವರ, ಪರಶು ಅಡ್ಮನಿ, ಚೌಡಪ್ಪ, ಸೋಮಶೇಖರ ನಾಯಕ, ಸಂತೋಷ ಹೊಸಳ್ಳಿ, ಮಂಜು ಜಾಧವ ಮುಂತಾದವರು ಇದ್ದರು.