ಅನ್ಯಾಯದ ವಿರುದ್ದ ಧ್ವನಿಯಾಗಿ, ಸಮಾನತೆಗಾಗಿ ಹೋರಾಡಿದ ಯುಗ ಪುರುಷ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅನ್ಯಾಯದ ವಿರುದ್ದ ಧ್ವನಿಯಾಗಿ, ಸಮಾನತೆಗಾಗಿ ಹೋರಾಡಿದ ಯುಗ ಪುರುಷ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರ ತತ್ವಗಳು, ಆದರ್ಶಗಳು ಹಾಗೂ ಮೌಲ್ಯಗಳು ಉದಾತ್ತವಾಗಿದ್ದು, ನಾವೆಲ್ಲ ಅದೇ ಸಂಕಲ್ಪ ಮಾಡಿ ಅವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.
ಅತ್ಯಂತ ಸುಶಿಕ್ಷಿತರಾಗಿದ್ದ ಅವರು ಶ್ರೇಷ್ಟ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರಾದ ಇವರು ಅತ್ಯಂತ ಮೇಧಾವಿ. ಅಸಮಾನತೆ ವಿರುದ್ದ ಧ್ವನಿ ಎತ್ತಿ, ಮಹಿಳಾ ಹಕ್ಕುಗಳಿಗೆ ಹೋರಾಡಿ, ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಹಕ್ಕುಗಳನ್ನು ನೀಡಿದರು. ಇಂದಿನ ಯುವಜನತೆ ಅಂಬೇಡ್ಕರ್ ಜೀವನ ಚರಿತ್ರೆ, ಅವರ ಸಾಹಿತ್ಯವನ್ನು ಓದಿ ತಿಳಿದರೆ ಸಾಕು, ಖಿನ್ನತೆಯಿಂದ ಹೊರ ಬರಬಹುದು. ಅಂಬೇಡ್ಕರ್ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೇಲವ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿ. ಅಸ್ಪೃಶ್ಯತೆ ನಿವಾರಣೆ ಮಾಡಿ, ಸರ್ವಧರ್ಮಗಳು ಸಮ ಭಾವದಿಂದ ಬದುಕಬೇಕೆಂಬ ಸಂವಿಧಾನ ನೀಡಿದ ಮಹಾನ್ ಚೇತನ. ಬಿದ್ದವರನ್ನು ಮೇಲೆತ್ತಿ, ಅಸ್ಪೃಶ್ಯತೆ ವಿರುದ್ದ ಗಟ್ಟಿಯಾಗಿ ಧ್ವನಿ ಎತ್ತಿದ ಅಂಬೇಡ್ಕರ್ ಮೊದಲ ಸೂತ್ರ ಶಿಕ್ಷಣವಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.
ಭಾರತೀಯ ಸಂವಿಧಾನ ರಚನೆ ಮುನ್ನ ನಮ್ಮ ದೇಶದ ಪ್ರತಿ ಅಂಶಗಳನ್ನು ಅಧ್ಯಯನ ಮಾಡಿ, ಸರ್ವಧರ್ಮಗಳು ಸಮವೆಂದು ಸಾರುವ ಅಂಶಗಳ ಆಧಾರದ ಮೇಲೆ ಸಂವಿಧಾನ ರಚಿಸಿ ಪ್ರಾತಸ್ಮರಣೀಯರಾಗಿದ್ದಾರೆ. ದೇಶಕ್ಕಾಗಿ ಬದುಕಿದ ಅವರ ಕಾರ್ಯಗಳು ಎಂದಿಗೂ ಜೀವಂತ ಎಂದರು.ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೈವದತ್ತ ಕೊಡುಗೆ. ನಮ್ಮ ಸಂವಿಧಾನಕ್ಕೆ ಮಹಾನ್ ಶಕ್ತಿ ಇದ್ದು, ಪರಿಣಾಮಕಾರಿಯಾಗಿ ನಾವೆಲ್ಲ ಅನುಷ್ಠಾನ ಮಾಡಿಕೊಂಡು ಹೋಗಬೇಕಿದೆ. ನಮ್ಮೆಲ್ಲರಿಗೆ ಧ್ವನಿ ನೀಡಿದ ಮಹಾನ್ ಚೇತನವು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು. ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಗಾಗಿ ವಿಶೇಷವಾಗಿ ಹೋರಾಡಿದ ಶಕ್ತಿ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ನಾಗೇಶ್ ಬಿದರಗೋಡು ಮಾತನಾಡಿ, ಈಗಲೂ ಅಸಮಾನತೆ ಇದೆ. ನಮ್ಮ ಎದೆಯೊಳಗೆ ಅಂಬೇಡ್ಕರ್ ಇಳಿಯದ ಹೊರತು, ಅವರನ್ನು ಅನುಸರಿಸದ ಹೊರತು ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದರು.ವಿಧಾನ ಪರಿಷತ್ ಸದಸ್ಯೆ ಡಾ.ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ (ವಿದ್ಯುತ್ ಮಗ್ಗಗಳು) ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಹೇಮಂತ್ ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ , ಪಾಲಿಕೆ ಆಯುಕ್ತ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.