ಸಾರಾಂಶ
ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೊಂಬತ್ತಿ ಹಚ್ಚಿ ಮೌನ ಆಚರಿಸುವುದರ ಮೂಲಕ ನಮನ ಸಲ್ಲಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವೆಂಕಟರಮಣ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸೂತ್ರದ ಮೂಲಕ ಸಮಾಜಕ್ಕೆ ಕರೆ ನೀಡಿದ ಅಂಬೇಡ್ಕರ್ ಅವರು ಶೋಷಿತರ, ದೀನ ದಲಿತರ, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು. ಅಂಬೇಡ್ಕರ್ ಈ ದೇಶಕ್ಕಾಗಿ ಪಟ್ಟಂತಹ ಕಷ್ಟ, ನೋವು ಮತ್ತು ಅವಮಾನಗಳನ್ನು ಹಾಗೂ ಅವರ ಸಂದೇಶಗಳನ್ನು ತಿಳಿಯಲು ಅವರು ಬರೆದಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಿಕೊಳ್ಳಬೇಕು ಎಂದರು.ಸಂದರ್ಶಕ ಪ್ರಾಧ್ಯಾಪಕ ಹನೂರು ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ಮಾರ್ಗದರ್ಶನದಂತೆ ಬದುಕುವ ಅವಶ್ಯಕತೆ ಇದೆ ಎಂದರು. ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ಕೊಟ್ಟಂತಹ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡು ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದರು.
ವಿದ್ಯಾರ್ಥಿಗಳು ಅಂಬೇಡ್ಕರ್ ಸಮಸಮಾಜಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ, ಹೆಜ್ಜೆಗೆಜ್ಜೆಗೂ ನೋವು, ಅವಮಾನವನ್ನು ಅನುಭವಿಸಿದ್ದಾರೆ. ಅವರನ್ನು ಸಮಾಜ ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ದೇಶದ ಜನತೆ ಸೋತಿದೆ. ವಿದ್ಯಾರ್ಥಿಗಳು ಅವರ ಬರಹಗಳನ್ನು ಓದಿ ಅವರ ಮಾರ್ಗವನ್ನು ಅನುಸರಿಸಬೇಕು ಎಂದರು. ಈ ಸಂದರ್ಭದಲ್ಲಿ ಡಾ.ರಾಘವೇಂದ್ರ, ಡಾ.ಶಿವರಾಜ್, ಮಹೇಶ್, ಡಾ.ಮಹೇಶ್, ರಾಣಿ, ಶ್ವೇತ, ಭಾಗ್ಯ, ಶಾಲಿನಿ, ಶರ್ಮಿಳ, ಮಲ್ಲಿಕಾರ್ಜುನ ಮತ್ತು ಹಲವಾರು ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.