ಸಾರಾಂಶ
- ಪ್ರಗತಿಪರ ಚಿಂತಕ ರಾಮಚಂದ್ರ ಗುಹಾ ಅಭಿಮತ- ಗಾಂಧಿ- ಅಂಬೇಡ್ಕರ್ ಪ್ರಸ್ತುತತೆ ಕುರಿತ ವಿಚಾರ ಸಂಕಿರಣ ---
ಕನ್ನಡಪ್ರಭ ವಾರ್ತೆ ಮೈಸೂರುಆಧುನಿಕ ಚರಿತ್ರೆಯಲ್ಲಿ ಜಾತಿ ತಾರತಮ್ಯ ನಿವಾರಣೆಗೆ ಅಂಬೇಡ್ಕರ್ ಮತ್ತು ಗಾಂಧಿ ಬಹಳ ಮುಖ್ಯರಾಗುತ್ತಾರೆ ಎಂದು ಪ್ರಗತಿಪರ ಚಿಂತಕ ರಾಮಚಂದ್ರ ಗುಹಾ ತಿಳಿಸಿದರು.
ಮೈಸೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ- ಅಂಬೇಡ್ಕರ್ ಪ್ರಸ್ತುತತೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಅಂಬೇಡ್ಕರ್ ಅವರು ಸಂವಿಧಾನ ಸಮರ್ಪಿಸುವ ಮುನ್ನ ಭಕ್ತಿ, ಧರ್ಮ ಮನಸ್ಸಿನ ಶಾಂತಿಗೆ ಅಗತ್ಯ. ಭಕ್ತಿ ಧರ್ಮ ರಾಜಕೀಯಕ್ಕೆ ಬೆರೆಸಿದರೆ ಸರ್ವಾಧಿಕಾರಕ್ಕೆ ದಾರಿಯಾಗುತ್ತದೆ. ಇವತ್ತಿನ ಪರಿಸ್ಥಿತಿ ಅಂಬೇಡ್ಕರ್ ಹೇಳಿಕೆಗೆ ಪೂರಕವಾಗಿದೆ ಎಂದು ಅವರು ಹೇಳಿದರು.
2024 ರಲ್ಲಿ ಭಾರತ ಹಿಂದೂ ರಾಷ್ಟ್ರವಾಗುವುದನ್ನು ತಡೆಯಬೇಕು. ಇಲ್ಲದಿದ್ದರೆ ದೇಶ ನಾಶವಾಗುತ್ತದೆ. ಮಹಾತ್ಮ ಗಾಂಧೀಜಿ 1915 ರಲ್ಲಿ ಭಾರತಕ್ಕೆ ಬಂದಾಗ ತಮಿಳುನಾಡಿನ ಸ್ನೇಹಿತರೊಬ್ಬರು ಅತ್ಯಂತ ಹೀನಾಯವಾದ ಅಸ್ಪಶ್ಯತೆ ವಿರುದ್ಧ ಹೋರಾಡುವಂತೆ ಮನವಿ ಮಾಡಿದರು. 1919ರ ವೇಳೆಗೆ ಅಸ್ಪಶ್ಯತೆ ಆಚರಿಸುವುದು ಮಹಾಪಾಪ ಎಂದು ಗಾಂಧೀಜಿ ಘೋಷಿಸಿದ್ದಾಗಿ ಅವರು ಹೇಳಿದರು.ಗಾಂಧಿಗೆ ಅಸ್ಪಶ್ಯತೆ ನಿವಾರಣೆ ಒಂದೇ ಕಾರ್ಯಕ್ರಮವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟ, ಮುಸ್ಲಿಂರ ಸಮಸ್ಯೆ ಸೇರಿ ಹಲವು ಕಾರ್ಯಕ್ರಮಗಳಿದ್ದವು. ನೆಹರೂ, ಪಟೇಲ್, ಭಗತ್ ಸಿಂಗ್ ಸಹಿತ ಮೇಲ್ವರ್ಗದ ಯಾವ ನಾಯಕರೂ ಅಸ್ಪಶ್ಯತೆ ಕುರಿತು ಮಾತಾಡದಿದ್ದಾಗ ಗಾಂಧೀಜಿ ಅಸ್ಪಶ್ಯತೆ ನಿವಾರಣೆ ಕಾರ್ಯಕ್ರಮ ರೂಪಿಸಿದ್ದಾಗಿ ಅವರು ಹೇಳಿದರು.
ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಸನಾತನ ಹಿಂದೂ ನನ್ನ ಧರ್ಮ ಎಂದಿದ್ದರು. ಕೊನೆಗೇ ಸಹನೆ ಮತ್ತು ಪ್ರೀತಿ ನನ್ನ ಧರ್ಮ ಎಂದರು. ಅಂಬೇಡ್ಕರ್ ಅಂತಿಮ ದಿನಗಳಲ್ಲಿ ಕಾರುಣ್ಯ ನನ್ನ ಧರ್ಮ ಎಂದರು. ಸ್ವಭಾವತಃ ಧಾರ್ಮಿಕ ವ್ಯಕ್ತಿಗಳಾದ ಇಬ್ಬರು ಹೇಳುತ್ತಿರುವುದು ಒಂದೇ ಎಂದು ತಿಳಿಸಿದರು.ಗಾಂಧಿ. ಅಂಬೇಡ್ಕರ್ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ. ಗಾಂಧಿ ಅಸ್ಪಶ್ಯತೆ ಪಾಪ ಎಂದರೆ ಅಂಬೇಡ್ಕರ್ ಅಪರಾಧ. ಇವರಿಬ್ಬರ ಆಂತರ್ಯದ ಆಲೋಚನೆಯ ಮೂಲ ಬೇರೆ ಬೇರೆ ರೀತಿ ಇದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್- ಗಾಂಧೀ ಕೊನೆಯ ದಿನಗಳನ್ನು ನೋಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಪಂಚಮಶಾಲೆ ತೆರೆದ ಗೋಪಾಲಸ್ವಾಮಿ ಅಯ್ಯರ್ ಅವರನ್ನು ದಲಿತರು ಸ್ಮರಿಸುತ್ತಾರ ಎಂಬ ಗುಹಾ ಅವರ ಪ್ರಶ್ನೆಗೆ, ನನ್ನ ಬಗ್ಗೆ ದಲಿತರಿಗೆ ಭಿನ್ನಾಭಿಪ್ರಾಯವಿದ್ದರೂ, ಗೋಪಾಲಸ್ವಾಮಿ ಅಯ್ಯರ್, ಕುದಲ್ ರಂಗರಾವ್ ಅವರನ್ನು ಸ್ಮರಿಸುವುದಾಗಿ ತಿಳಿಸಿದೆ ಎಂದರು.ತಪ್ಪಿಸಿಕೊಂಡ ಬಾಲ್ಯದ ಸಹೋದರರು
ಸಾಹಿತಿ ದೇವನೂರ ಮಹಾದೇವ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಸೋಮವಾರ ಮುಖಾಮುಖಿಯಾದರು. ಈ ಕುರಿತು ಪ್ರತಿಕ್ರಿಯಿಸಿದ ದೇವನೂರ ಮಹಾದೇವ, ಬಾಲ್ಯದಲ್ಲಿ ಕಳೆದುಹೋದ ಸಹೋದರರಿಬ್ಬರು ಇಳಿವಯಸ್ಸಿನಲ್ಲಿ ಭೇಟಿಯಾದಂತೆ ಇತ್ತು ಎಂದು ಬಣ್ಣಿಸಿದರು.ಸಾಹಿತಿ ವಿವೇಕ ಶಾನಭಾಗ ರಾಮಚಂದ್ರ ಗುಹಾ ಅವರ ಭಾಷಣವನ್ನು ಅನುವಾದಿಸಿದರು. ಗಾಂಧೀ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.