ಸಾರಾಂಶ
ಮುಂದಿನ ದಿನಗಳಲ್ಲಿ ಬರುವ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಂ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲು ತಮ್ಮೆಲ್ಲರ ಸಹಕಾರ ಪ್ರಮುಖವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಮುಂದಿನ ದಿನಗಳಲ್ಲಿ ಬರುವ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಂ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲು ತಮ್ಮೆಲ್ಲರ ಸಹಕಾರ ಪ್ರಮುಖವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಕರೆದಿದ್ದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ನಾಡು ಕಂಡತಹ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನವನ್ನು ಅರ್ಥ ಪೂರ್ಣ ಆಚರಣೆ ಮಾಡಬೇಕು. ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಮುಂದಿನ ಪೀಳಿಗೆಗೆ ಇವರ ಇತಿಹಾಸ ತಿಳಿಸಬೇಕಾದದ್ದು ನಮ್ಮ ಕರ್ತವ್ಯ, ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡೋಣ ಎಂದರು.
ಏ.5ರಂದು ಆಚರಣೆ ಮಾಡಬೇಕಿದ್ದ ಬಾಬು ಜಗಜೀವನ್ ರಾಂ ಜಯಂತಿಯನ್ನು ಸಮುದಾಯದ ಸದಸ್ಯರ ತೀರ್ಮಾನದಂತೆ ಸಮಯ ನಿಗದಿ ಮಾಡಿ ಬೇರೆ ದಿನಾಂಕ ನಿಗದಿ ಪಡಿಸಿ ವಿಜೃಂಭಣೆಯಿಂದ ಆಚರಣೆ ಮಾಡಲು ತಿಳಿಸಲಾಯಿತು. ಇಲಾಖೆಯ ನಿಯಮಾನುಸಾರ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಸರಳವಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು. ಉಳಿದಂತೆ ಅಂಬೇಡ್ಕರ್ ಜಯಂತಿಯನ್ನು ಏ.14 ರಂದೇ ಮಾಡಲು ಒಕ್ಕೊರಲಿನಿಂದ ತೀರ್ಮಾನ ಮಾಡಲಾಯಿತು. ಡಾ.ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿ ವೇದಿಕೆ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು.ಅಧಿಕಾರಿಗಳ ಗೈರು: ಪೂರ್ವ ಭಾವಿ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಹಿನ್ನಲೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ನೋಟಿಸ್ ಜಾರಿ ಮಾಡುವಂತೆ ದಲಿತ ಮುಖಂಡರು ಒತ್ತಾಯ ಮಾಡಿದರು. ಇದೆ ವೇಳೆ ನಿಗದಿತ ಸಮಯಕ್ಕೆ ಸಭೆ ಆರಂಭವಾಗದ ಹಿನ್ನಲೆ ಅಸಮಾಧಾನ ಹೊರ ಹಾಕಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಗ್ಯಾರಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷ ರಾಚಪ್ಪ, ತಾಪಂ ಇಒ ಉಮೇಶ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್, ಸದಸ್ಯರಾದ ಸುದೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.