ಸಾರಾಂಶ
ನಂಜನಗೂಡು: ಡಾ.ಬಿ.ಆರ್. ಅಂಬೇಡ್ಕರ್ ಭವನಗಳನ್ನು ಗ್ರಂಥಾಲಯಗಳನ್ನಾಗಿ ರೂಪಿಸುವ ಮೂಲಕ ಶಿಕ್ಷಣ ಹಾಗೂ ಜ್ಞಾನದ ಕೇಂದ್ರಗಳನ್ನಾಗಿ ಮಾಡುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಹುಲ್ಲಹಳ್ಳಿ ಗ್ರಾಮದ ಭೀಮ ಬಳಗದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶೋಷತ ಸಮಾಜಗಳ ವಿಮೋಚನೆಗೆ ಶಿಕ್ಷಣ ಒಂದೇ ಪ್ರಮುಖ ಅಸ್ತ್ರ, ಆದ್ದರಿಂದಲೇ ಬಾಬಾ ಸಾಹೇಬರು ಹಾಕಿಕೊಟ್ಟ ಶಿಕ್ಷಣದ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಬಂಧುಗಳು ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಜೊತೆಗೆ ತಾಲೂಕಿನಲ್ಲಿ ನಿರ್ಮಾಣವಾಗಿರುವ ಎಲ್ಲಾ ಅಂಬೇಡ್ಕರ್ ಭವನಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಶಿಕ್ಷಣಕ್ಕೆ ನೆರವಾಗುವಂತೆ ಜ್ಞಾನದ ಕೇಂದ್ರಗಳನ್ನಾಗಿ ರೂಪಿಸುವುದು ಬಾಬಾ ಸಾಹೇಬರಿಗೆ ನಾವೆಲ್ಲರೂ ಸಲ್ಲಿಸುವ ನಿಜವಾದ ಗೌರವ ಎಂದರು.
ನನ್ನ ತಂದೆ 10 ವರ್ಷಗಳ ಕಾಲ ಈ ಭಾಗದ ಸಂಸದರಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಲ್ಲದೆ ಏಕಲವ್ಯ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಮೊರಾರ್ಜಿ ದೇಸಾಯಿ, ಆದರ್ಶ ಶಾಲೆಗಳನ್ನು ತೆರೆದಿದ್ದಾರೆ ಜೊತೆಗೆ ಚಾಮರಾಜನಗರದಲ್ಲಿ ಕಾನೂನು ಕೃಷಿ ಮತ್ತು ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಪಿಯುಸಿ ವಿದ್ಯಾರ್ಥಿನಿಯರಿಗೆ ನೆರವಾಗುವಂತೆ ಆರ್. ಧ್ರುವನಾರಾಯಣ್ ಟ್ರಸ್ಟ್ ವತಿಯಿಂದ ಸಿಇಟಿ ಮತ್ತು ಎನ್ಇಇಟಿ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.ಮುಖ್ಯ ಭಾಷಣಕಾರರಾಗಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಬಾಬಾ ಸಾಹೇಬರ ಸಂವಿಧಾನವನ್ನು ಒಪ್ಪಿಕೊಳ್ಳದ ಆರ್.ಎಸ್.ಎಸ್ ಸಂವಿಧಾನ ಪೀಠಿಕೆಯಲ್ಲಿರುವ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ನಮ್ಮ ದೇಶದ ಸಂಸ್ಕೃತಿಯಲ್ಲ ಎಂದು ಪ್ರತಿಪಾದಿಸಿ ಆ ಪದಗಳನ್ನು ಸಂವಿಧಾನ ಪೀಠಿಕೆಯಿಂದ ತೆಗೆಯುವ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಓನ್ನಾರ ನಡೆಸುತ್ತಿದೆ ಎಂದರು.
ಮಾಜಿ ಮೇಯರ್‌ಪುರುಷೋತ್ತಮ್ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಿರಂತರ ದಾಳಿಗಳು ನಡೆಯುತ್ತಿವೆ, ದೇಶ ಸಂವಿಧಾನದಿಂದ ಅಭಿವೃದ್ಧಿ ಹೊಂದಿದೆ, ಜಾತ್ಯಾತೀತತೆ, ಸಮಾಜವಾದಗಳನ್ನು 1974 ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಸೇರಿಸಿದ್ದಾಗಿ ತಿಳಿಸಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ವಕೀಲ ಉಮೇಶ್, ಮುಖಂಡ ವಿ. ರಾಮಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಮುಖಂಡರಾದ ಕುರಿಹುಂಡಿ ರಾಜು, ಅಶೋಕ್, ನಾಗರಾಜಯ್ಯ, ಶಿವನಂಜ ನಾಯಕ, ಮಹೇಶ್, ಮಲ್ಲಿಕಾರ್ಜುನ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಡ್ಯ ಜಯರಾಮು, ಯೂತ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ವಿಜಯಕುಮಾರ್, ದಶಂಸ ಸಂಚಾಲಕ ಶಂಕರಪುರ ಮಂಜು, ಗ್ರಾಪಂ ಅಧ್ಯಕ್ಷೆ ದೇವಮ್ಮ, ಉಪಾಧ್ಯಕ್ಷ ಲೋಕೇಶ್, ಲೋಕೋಪಯೋಗಿ ಇಲಾಖೆ ಎಇಇ ಬಸವರಾಜು, ಭೀಮ ಬಳಗದ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ಪ್ರಸಾದ್, ಕುಮಾರ್, ಚೌಡಯ್ಯ, ಮಧುಕರ, ಡಿ. ಮಹೇಶ, ಚಿಕ್ಕಣ್ಣ, ಅಭಿಷೇಕ್ ಮೊದಲಾದವರು ಇದ್ದರು.