ಸಾರಾಂಶ
ಚಾಮರಾಜನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭವನ್ನು ಸಂಸದ ಸುನೀಲ್‌ಬೋಸ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಕ್ಷರ ಕಲಿಯುವುದು ಅಪರಾಧ ಎನ್ನುವ ಕಾಲದಲ್ಲಿಯೇ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಹಲವು ದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ವಿಶ್ವಜ್ಞಾನಿ ಎನಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸರಿ ಸಮಾನರಾದವರು ಯಾರು ಇಲ್ಲ ಎಂದು ಸಂಸದ ಸುನೀಲ್‌ಬೋಸ್ ಹೇಳಿದರು. ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬಾಲ್ಯದಲ್ಲಿಯೇ ಸಾಕಷ್ಟು ಸವಾಲುಗಳನ್ನು ಮೆಟ್ಟಿನಿಂತು ವಿದ್ಯಾಭ್ಯಾಸ ಮಾಡಿದ ಡಾ.ಅಂಬೇಡ್ಕರ್ ದೇಶ ವಿದೇಶಗಳಲ್ಲಿ ಶಿಕ್ಷಣ ಪಡೆದರು. ಅವರಲ್ಲಿದ್ದ ಅಪಾರ ಜ್ಞಾನದಿಂದ ಇಡೀ ವಿಶ್ವದಲ್ಲೇ ಶ್ರೇಷ್ಠವಾಗಿರುವ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ಕೊಟ್ಟರು. ಇಂತಹ ಮೇಧಾವಿ ವಿಶ್ವಜ್ಞಾನಿಯ ಜನ್ಮದಿನವನ್ನು ವಿಶ್ವಜ್ಞಾನ ದಿನವನ್ನಾಗಿ ಎಲ್ಲ ದೇಶಗಳಲ್ಲಿಯೂ ಆಚರಿಸಲಾಗುತ್ತಿದೆ ಎಂದರು.ಅಂಬೇಡ್ಕರರು ಎಲ್ಲ ಶೋಷಿತ ಸಮುದಾಯವು ಸ್ವಾಭಿಮಾನದ ಬದುಕು ಕಟ್ಟಿಕೊಡಲು ಅಪಾರವಾಗಿ ಶ್ರಮಿಸಿದ್ದಾರೆ. ಆದರೆ ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಲಾಗುತ್ತಿದೆ ಇದು ಸರಿಯಲ್ಲ. ಕಾರ್ಮಿಕರಿಗಾಗಿಯೇ ಮಸೂದೆ ತಂದು 8 ಗಂಟೆಗಳ ಕಾಲ ಕೆಲಸದ ಅವಧಿಯನ್ನು ನಿಗದಿ ಮಾಡಿದರು. ಎಲ್ಲ ಮಹಿಳೆಯರಿಗೂ ಮತದಾನದ ಹಕ್ಕು ನೀಡಿ ಮುಖ್ಯವಾಹಿನಿಗೆ ಬರಲು ಅನುಕೂಲ ಮಾಡಿಕೊಟ್ಟರು. ಈ ಮೂಲಕ ಎಲ್ಲ ವರ್ಗದ ಜನರಿಗೆ ಅಂಬೇಡ್ಕರ್ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂಬುದನ್ನು ಮನಗಾಣಬೇಕಿದೆ ಎಂದರು.ಸಮಸಮಾಜ ನಿರ್ಮಾಣಕ್ಕೆ ಅವಿರತ ಹೋರಾಟ:
ಅಧ್ಯಕ್ಷತೆ ವಹಿಸಿದ್ದ ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸಮಸಮಾಜ ನಿರ್ಮಾಣ ಮಾಡಿ ಶೋಷಿತ ವರ್ಗ ಏಳಿಗೆಯಾಗಲು ತಮ್ಮ ಜೀವನದುದ್ದಕ್ಕೂ ಅವಿರತವಾಗಿ ಹೋರಾಟ ಮಾಡಿದ ಮಹಾನ್ ಮೇರು ನಾಯಕರು ಡಾ.ಬಿ.ಆರ್.ಅಂಬೇಡ್ಕರ್. ಶಾಂತಿ, ಸಹನೆ, ತಾಳ್ಮೆಯಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ತಿದ್ದಿ ಜನರ ಬದುಕು ಹಸನು ಮಾಡಲು ನಿರಂತರವಾಗಿ ಶ್ರಮಿಸಿದರು ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಕರೆಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ, ಮಹತ್ವವನ್ನು ಅರಿಯಬೇಕು ಅಂಬೇಡ್ಕರ್ ಅವರ ಆದರ್ಶ, ತ್ಯಾಗ, ಹೋರಾಟದ ಗುಣಗಳನ್ನು ಬದುಕಿನಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು. ಇದರಿಂದ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಟಿ.ನರಸೀಪುರದ ನಳಂದ ಬುದ್ದವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಸ್ತು ಸಂಯಮಕ್ಕೆ ಹೆಸರಾದವರು. ತುಳಿತಕ್ಕೆ ಒಳಗಾದ ಸರ್ವಜನರ ಉದ್ಧಾರಕ್ಕಾಗಿ ಸರ್ವವನ್ನು ತ್ಯಾಗಮಾಡಿದರು. ಅವರ ವಿಚಾರ, ಆದರ್ಶಗಳನ್ನು ತಿಳಿದು ಅದರ ಪರಿಪಾಲನೆ ಮಾಡುವುದು ಮುಖ್ಯವಾಗಿದೆ. ನೈತಿಕ ಭಯ, ನಾಚಿಕೆ ಇದ್ದಾಗ ಒಳ್ಳೆಯದನ್ನು ಮಾಡುವ ಗುಣಗಳು ಮೈಗೂಡಿ ಸುಧಾರಣೆ ಸಾಧ್ಯವಾಗಲಿದೆ ಎಂದರು.
ಸಚಿವ ಕೆ.ವೆಂಕಟೇಶ್ ಸಂದೇಶ ವಾಚನ:ಅಧ್ಯಯನ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಕಳುಹಿಸಿದ್ದ ಸಂದೇಶವನ್ನು ವಾಚಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಶ್ರೇಷ್ಠನಾಯಕರು ಸಂವಿಧಾನದ ದೊಡ್ಡಶಕ್ತಿಯಾಗಿದ್ದ ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ೩೦ ವರ್ಷಗಳ ಕಾಲ ಅಧ್ಯಯನ ಮಾಡಿ ಅಪಾರ ಪಾಂಡಿತ್ಯ ಗಳಿಸಿದ್ದ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕು. ಅವರ ಹೋರಾಟ ಬದುಕು ನಮ್ಮೆಲ್ಲರಿಗೆ ಮಾದರಿ ಎಂದರು.
ಮುಖ್ಯ ಭಾಷಣ ಮಾಡಿದ ಭೋಗಾಪುರದ ಸರ್ಕಾರಿ ಪ್ರಥಮದರ್ಜೆ ವಸತಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು, ಅಂಬೇಡ್ಕರ್ ಕೇವಲ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಿಂದುಳಿದ ಜನಾಂಗದವರಿಗಾಗಿ ಮಾತ್ರ ಹೋರಾಡಲಿಲ್ಲ. ಎಲ್ಲ ಜಾತಿ ಧರ್ಮಗಳ ಮಹಿಳೆಯರ ವಿಮೋಚನೆ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ನಡೆ-ನುಡಿಯಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಅಂಬೇಡ್ಕರ್ ಶಿಕ್ಷಣ, ಸ್ವಾಭಿಮಾನ, ವೈಯಕ್ತಿಕ ಗುಣ ಲಕ್ಷಣಗಳಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದು ತಿಳಿಸಿದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ನಗರಸಭೆ ಸದಸ್ಯೆ ಎಂ.ಕಲಾವತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್.ಮುನಿರಾಜು, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪಾ, ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.