ಶೋಷಣೆ ಮಾಡಿದವರಿಂದಲೇ ಅಂಬೇಡ್ಕರ್ ಜಪ: ಶೇಷಾದ್ರಿ

| Published : Dec 25 2023, 01:30 AM IST

ಶೋಷಣೆ ಮಾಡಿದವರಿಂದಲೇ ಅಂಬೇಡ್ಕರ್ ಜಪ: ಶೇಷಾದ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಜಾತಿ ಹೆಸರಲ್ಲಿ ಅಂಬೇಡ್ಕರ್ ಅವರನ್ನು ಶೋಷಣೆ ಮಾಡಿದ ಸಮುದಾಯವೇ ಇಂದು ಅವರನ್ನು ಜಪ ಮಾಡುವಂತಹ ಬದಲಾವಣೆಗಳಾಗಿವೆ. ಇದು ಅಂಬೇಡ್ಕರ್ ಅವರ ವಿಚಾರಧಾರೆಗೆ ಇರುವ ಶಕ್ತಿ ಎಂದು ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ. ಶೇಷಾದ್ರಿ ಬಣ್ಣಿಸಿದರು.

ರಾಮನಗರ: ಜಾತಿ ಹೆಸರಲ್ಲಿ ಅಂಬೇಡ್ಕರ್ ಅವರನ್ನು ಶೋಷಣೆ ಮಾಡಿದ ಸಮುದಾಯವೇ ಇಂದು ಅವರನ್ನು ಜಪ ಮಾಡುವಂತಹ ಬದಲಾವಣೆಗಳಾಗಿವೆ. ಇದು ಅಂಬೇಡ್ಕರ್ ಅವರ ವಿಚಾರಧಾರೆಗೆ ಇರುವ ಶಕ್ತಿ ಎಂದು ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ. ಶೇಷಾದ್ರಿ ಬಣ್ಣಿಸಿದರು.

ನಗರದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ನಮ್ಮವರು– ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ‘ ಹಮ್ಮಿಕೊಂಡಿದ್ದ ಎಲಿನಾರ್ ಝೆಲಿಯಟ್ ಅವರ ‘ಅಂಬೇಡ್ಕರ್ಸ್‌ ವರ್ಲ್ಡ್’ನ ಅನುವಾದಿತ ಕೃತಿ ‘ಅಂಬೇಡ್ಕರ್ ಜಗತ್ತು’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂರ್ಯ ಚಂದ್ರ ಇರುವವರೆಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ಜೀವಂತವಾಗಿರುತ್ತವೆ ಎಂದರು.

ದೇಶದಲ್ಲಿ ಸದ್ಯ ಉತ್ತಮ ವಾತಾವರಣವಿಲ್ಲ. ನಮ್ಮನ್ನು ಆಳುತ್ತಿರುವವರಿಂದಿಡಿದು ಹಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನದ ವಿರೋಧಿ ಕಾರ್ಯಸೂಚಿಗಳ ಜಾರಿಗೆ ಮುಂದಾಗಿವೆ. ಹಾಗಾಗಿ, ಸಂವಿಧಾನದ ಅರಿವಿನ ಜೊತೆಗೆ, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಕೃತಿ ಕುರಿತು ಮಾತನಾಡಿದ ಹಿರಿಯ ಪತ್ರಕರ್ತೆ ಎಸ್. ರಶ್ಮಿ ,ಪ್ರತಿ ಪುಸ್ತಕದ ಓದು ನಮ್ಮಲ್ಲಿ ಒಂದು ಬದಲಾವಣೆಯನ್ನು ತರುತ್ತದೆ. ಆದರೆ, ಉತ್ತಮ ಪುಸ್ತಕ ನಮ್ಮ ಅಂತಃಕರಣವನ್ನು ಕೆದಕಿ ಸರಿ– ತಪ್ಪುಗಳನ್ನು ವ್ಯಾಖ್ಯಾನಿಸುತ್ತದೆ. ಅಂತಹ ಕೃತಿಗಳ ಸಾಲಿನಲ್ಲಿ ಅಂಬೇಡ್ಕರ್ ಜಗತ್ತು ನಿಲ್ಲುತ್ತದೆ ಎಂದು ವಿಶ್ಲೇಷಿಸಿದರು.

ನಮ್ಮಲ್ಲಿ ಅರಿವಿದ್ದಾಗ ಯಾರೂ ನಮ್ಮನ್ನು ಅಣಿಯಲು ಸಾಧ್ಯವಿಲ್ಲ. ಆದರೆ, ಅರಿವು ಎನ್ನುವುದು ಓದಿನಿಂದ ಮಾತ್ರ ಬರುತ್ತದೆ. ಕೃತಿಯಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರದ ಭಾಷೆ ಬಳಸಲಾಗಿದೆ. ಸಂಖ್ಯಾತ್ಮಕ ಶ್ರೇಷ್ಠತೆ ಮತ್ತು ರಾಜಕೀಯ ಜ್ಞಾನೋದಯ ಎಂಬ ಪದಗಳು ದಮನಿತರಲ್ಲಾಗಬೇಕಾದ ಬದಲಾವಣೆಯನ್ನು ಸೂಚಿಸುತ್ತವೆ ಎಂದರು.

ರಾಜಕೀಯ ಎಂದರೆ ನಾವು ಆಳಿಸಿಕೊಳ್ಳುವುದಲ್ಲ. ಬದಲಿಗೆ, ನಮ್ಮ ಸೇವೆ ಮಾಡುವವನನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ. ಆದರೆ, ಇಂದು ಪರಿಸ್ಥಿತಿ ಭಿನ್ನವಾಗಿದೆ. ಸಂವಿಧಾನದ ರಕ್ಷಣೆ ಅಗತ್ಯವಾಗಿ ಆಗಬೇಕಿದೆ. ಇದಕ್ಕಾಗಿ ರಾಜಕೀಯವಾಗಿ ನಾವು ಜ್ಞಾನೋದಯವನ್ನು ಹೊಂದಬೇಕು ಎಂದು ಹೇಳಿದರು.

ಸಾಹಿತಿ ಮತ್ತು ಕೃತಿಯ ಅನುವಾದಕ ವಿಕಾಸ್ ಆರ್. ಮೌರ್ಯ, ಜೀರುಂಡೆ ಪ್ರಕಾಶನದ ಮಾಲೀಕ ಧನಂಜಯ, ಉಪನ್ಯಾಸಕ ಡಾ. ಎಚ್.ಡಿ. ಉಮಾಶಂಕರ್, ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ಕುಂಬಾಪುರ ಬಾಬು, ಉಪನ್ಯಾಸಕ ಕೃಷ್ಣ, ಡಾ. ನರಸಿಂಹಸ್ವಾಮಿ ಉಪಸ್ಥಿತರಿದ್ದರು.24ಕೆಆರ್ ಎಂಎನ್‌ 7.ಜೆಪಿಜಿ

ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಾಸ್ ಆರ್. ಮೌರ್ಯ ಅವರು ಅನುವಾದಿಸಿರುವ ‘ಅಂಬೇಡ್ಕರ್ ಜಗತ್ತು’ ಕೃತಿಯನ್ನು ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ. ಶೇಷಾದ್ರಿ ಶಶಿ, ಪತ್ರಕರ್ತೆ ರಶ್ಮಿ ಎಸ್, ಜೀರುಂಡೆ ಪ್ರಕಾಶನದ ಧನಂಜಯ ಬಿಡುಗಡೆ ಮಾಡಿದರು.