ಡಾ.ಬಿ.ಆರ್ ಅಂಬೇಡ್ಕರ್ ಆಗಾಧವಾದ ಜ್ಞಾನ ಭಂಡಾರ. ಅವರ ಬದುಕಿನ ಕುರಿತ ಓದಿ ಆದರ್ಶ ಸಂದೇಶವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವದಲ್ಲಿ ಪರಿಣಾಮಕಾರಿ ಬದಲಾವಣೆ ಹೊಂದಲು ಸಾಧ್ಯ. ಸಮಾಜದಲ್ಲಿನ ಅಸಮಾನತೆಯನ್ನು ವಿರೋಧಿಸಿ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಹಾದಿಯನ್ನು ರೂಪಿಸಿದವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಡಾ.ಬಿ.ಆರ್ ಅಂಬೇಡ್ಕರ್ ಆಗಾಧವಾದ ಜ್ಞಾನ ಭಂಡಾರ. ಅವರ ಬದುಕಿನ ಕುರಿತ ಓದಿ ಆದರ್ಶ ಸಂದೇಶವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವದಲ್ಲಿ ಪರಿಣಾಮಕಾರಿ ಬದಲಾವಣೆ ಹೊಂದಲು ಸಾಧ್ಯ. ಸಮಾಜದಲ್ಲಿನ ಅಸಮಾನತೆಯನ್ನು ವಿರೋಧಿಸಿ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಹಾದಿಯನ್ನು ರೂಪಿಸಿದವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು. ಅವರು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಜ್ಞಾನದ ಸಂಕೇತ ಜಗತ್ತಿನ ಎಲ್ಲಾ ವಿಚಾರದ ಕುರಿತು ಪಾಂಡಿತ್ಯವನ್ನು ಹೊಂದಿದ್ದ ಅವರು ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಜ್ಞಾನ ಯಾರಿಗೂ ಸೀಮಿತವಲ್ಲ ಪ್ರತಿಯೊಬ್ಬರಿಗೂ ಜ್ಞಾನವನ್ನು ಪಡೆದುಕೊಳ್ಳುವ ಹಕ್ಕಿದೆ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಡಾ. ಬಿ ಆರ್ ಅಂಬೇಡ್ಕರ್ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ರಂಗಕರ್ಮಿ ಗಣೇಶ್ ಶೆಟ್ಟಿ, ಗೌರವಯುತವಾಗಿ ಬದುಕಲು ಸಂವಿಧಾನವು ಬುನಾದಿಯನ್ನು ರೂಪಿಸಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರ ಚಿಂತನೆ ಜ್ಞಾನವನ್ನು ನಾವು ಪಡೆದುಕೊಳ್ಳಬೇಕು. ಶಿಕ್ಷಣ ಕೇವಲ ಉದ್ಯೋಗವನ್ನು ನೀಡುವುದಿಲ್ಲ ಸರಿ ತಪ್ಪುಗಳ ಕುರಿತು ಅಲೋಚಿಸುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದಿನ ಹವ್ಯಾಸ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಕಲಿಕೆ ಎಂಬುವುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಅಂಬೇಡ್ಕರ್ ದೇಶ ಕಂಡ ಶ್ರೇಷ್ಟ ನಾಯಕ ಅವರ ಕುರಿತ ಅನೇಕ ವಿಚಾರ ಧಾರೆಗಳ ಅಧ್ಯಯನವು ನಮ್ಮಲ್ಲಿನ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಅಯೋಜಿಸಲಾಗಿದ್ದ ಪ್ರಬಂಧ, ಭಾಷಣ, ರಸ ಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ದಿವ್ಯಾ ಎಂ ಎಸ್ , ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ.ನಳಿನಾಶ್ರೀ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾಲೇಜಿನ ಉಪನ್ಯಾಸಕ ವಸಂತ್ ಜಿ ನಿರೂಪಿಸಿ, ವಂದಿಸಿದರು