ಅಂಬೇಡ್ಕರ್‌ ಅವಹೇಳನ: ಶಾ ವಿರುದ್ಧ ಆಕ್ರೋಶ

| Published : Dec 21 2024, 01:15 AM IST

ಸಾರಾಂಶ

ಕನಕಪುರ: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅಮಿತ್ ಶಾ ಪ್ರತಿಕೃತಿಯ ಅಣಕು ಶವಯಾತ್ರೆಯಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಚನ್ನಬಸಪ್ಪ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನಕಪುರ: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅಮಿತ್ ಶಾ ಪ್ರತಿಕೃತಿಯ ಅಣಕು ಶವಯಾತ್ರೆಯಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಚನ್ನಬಸಪ್ಪ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಧಮ್ಮ ಧೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು, ಶೋಷಿತ ವರ್ಗಕ್ಕೆ ಸಮಾನತೆ ತಂದುಕೊಟ್ಟ ಅಂಬೇಡ್ಕರ್ ಅವರನ್ನು ಬಿಟ್ಟು ದೇವರ ನಾಮ ಜಪಿಸಿದರೆ ಏಳೇಳು ಜನ್ಮಕ್ಕೂ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಅಧಿವೇಶನದಲ್ಲಿ ವಿರೋಧ ಪಕ್ಷದವರಿಗೆ ಹೇಳುವ ಮೂಲಕ ಬಾಬಾ ಸಾಹೇಬರನ್ನು ಅವಹೇಳನ ಮಾಡಿದ್ದಾರೆ. ಹಸಿದವರಿಗೆ ಅನ್ನವಿಡದೆ, ರೊಟ್ಟಿ ನೀಡದೆ, ಸಂಕಷ್ಟಗಳಿಗೆ ನೆರವಾಗದೆ ಸತ್ತ ಮೇಲೆ ಸ್ವರ್ಗ ಸಿಗುತ್ತದೆ ಎಂದರೆ ಅಂತಹ ದೇವರು ನಮಗೆ ಧೂಳಿನ ಸಮಾನ. ಬಿಜೆಪಿ ಹಾಗೂ ಸಂಘ ಪರಿವಾರದವರು ಅಂಬೇಡ್ಕರರ ಬಗ್ಗೆ, ಈ ದೇಶದ ಸಂವಿಧಾನದ ಬಗ್ಗೆ ವಿಷಕಾರುತ್ತಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಇಂತವರ ಹೇಳಿಕೆಗಳು ದೇಶದ ಶಾಂತಿ ಕದಡುವ ಪ್ರಯತ್ನವಾಗಿದ್ದು ಈ ದೇಶದ ಮೂಲ ನಿವಾಸಿಗಳು ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು.

ದಲಿತ ಮುಖಂಡ ಜೆ.ಎಂ.ಶಿವಲಿಂಗಯ್ಯ ಮಾತನಾಡಿ, ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ. ಅವರೊಂದು ದಿವ್ಯ ಶಕ್ತಿ, ಮನುವಾದಿಗಳು ಬೇಕಿದ್ದರೆ ದೇವರ ನಾಮವನ್ನೆ ಕೊಂಡಾಡಲಿ, ನಾವು ದೇಶದುದ್ದಗಲಕ್ಕೂ ಜೈ ಭೀಮ್ ಘೋಷಣೆ ಮೊಳಗಿಸುತ್ತೇವೆ. ನಮ್ಮ ಜನ ಶೋಷಣೆಗೆ ಒಳಗಾಗಿದ್ದಾಗ ಯಾವ ದೇವರೂ ನಮ್ಮ ಕೈ ಹಿಡಿಯಲಿಲ್ಲ. ನೊಂದವರಿಗೆ, ಶೋಷಿತರಿಗೆ, ಮಹಿಳೆಯರಿಗೆ ದೇವರಾಗಿ ಬಂದವರು ಅಂಬೇಡ್ಕರ್ ಮಾತ್ರ. ಅದಕ್ಕಾಗಿ ನಾವು ಅವರ ಸ್ಮರಣೆ ಮಾಡುತ್ತೇವೆ, ಅದನ್ನು ಪ್ರಶ್ನಿಸಲು ಅಮಿತ್ ಶಾಗೆ ಏನು ಅರ್ಹತೆ ಇದೆ. ಪ್ರಧಾನ ಮಂತ್ರಿ ಮೋದಿಯವರು ದೇಶದ ಜನತೆಯ ಕ್ಷಮೆ ಕೇಳಿ, ಅಮಿತಾ ಶಾ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಜೀವನ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಹಿಂದೆ ಸಂಘ ಪರಿವಾರದ ಮಾಂಝಿ, ಗೋವಾಲ್ಕರ್, ಡಾ. ಹೆಗಡೆವಾರ್ ಹಾಗೂ ಸಾವರ್ಕರ್ ಆದಿಯಾಗಿ ಅಂಬೇಡ್ಕರ್ ಅವರನ್ನ ಸಂವಿಧಾನ ಬರೆದ ಕಾರಣಕ್ಕೆ, ಮನುಸ್ಮೃತಿಯನ್ನ ಸುಟ್ಟು ಹಾಕಿದರು ಎಂಬ ಒಂದೇ ಕಾರಣಕ್ಕೆ ದ್ವೇಷಿಸುತ್ತಾ ಬಂದಿದ್ದು, ಈಗ ಸಂವಿಧಾನ ಬದಲಾಯಿಸುವ ಸಂವಿಧಾನವನ್ನು ಸುಡುವ ಮೂಲಕ ಅಂಬೇಡ್ಕರ್‌ಗೆ ಅಪಮಾನ ಮಾಡುವ ತಂತ್ರಗಾರಿಕೆ ಅನುಸರಿಸುತ್ತಿದ್ದಅರೆ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ಸರ್ವ ಭಾರತೀಯರ ಸಮಾನತೆಯ ಸಾಧಕ, ಇವರ ಹೆಸರನ್ನು ಪ್ರತಿಯೊಬ್ಬ ಭಾರತೀಯರು ಪ್ರಾತಃಸ್ಮರಣೆ ಮಾಡಬೇಕು. ಯಾರು ಎಷ್ಟೇ ಪ್ರಯತ್ನಪಟ್ಟರೂ ಸೂರ್ಯ-ಚಂದ್ರರಿರುವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದು ತಿಳಿಸಿದರು.

ಪ್ರತಿಭಟನೆ ಬಳಿಕ ಅಮಿತ್ ಶಾ ಪ್ರತಿಕೃತಿ ದಹನ ಮಾಡಿ, ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ನೀಲಿ ರಮೇಶ್, ಚಿಕ್ಕಸ್ವಾಮಿ ಬುದ್ಧವಿಹಾರ ಸಮಿತಿ ನಟರಾಜ್, ದಿನೇಶ್, ಏಳಗಳ್ಳಿ ಹೆಚ್.ಎಸ್.ರವಿ.ಜೀವನ್, ತುಂಗಣಿ ಶಿವಮ್ಮ, ಅಭಿವೃದ್ಧಿ ವೆಂಕಟೇಶ್, ಶಾಂತಣ್ಣ, ಶೇಷಣ್ಣ ಗಿರಿಧರ್, ಲೋಕೇಶ್, ಶಿವಪ್ಪ, ಮಹದೇವ, ಪುಟ್ಟಮರೀಗೌಡ, ಆನಂದ, ನವೀನ್ ಶ್ರೀನಿವಾಸ್, ಸುರೇಶ್, ಶಿವಕುಮಾರ್, ನಾರಾಯಣ್, ಹುಲಿಬೆಲೆ ಶ್ರೀನಿವಾಸ್, ಕುನೂರು ಶ್ರೀನಿವಾಸ್, ರಾಮು ಭಾಗವಹಿಸಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಚನ್ನಬಸಪ್ಪ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.