ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವಜ್ಞಾನಿ ಎಂಬ ಗೌರವಕ್ಕೆ ಪಾತ್ರರಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಾದ್ಯಂತ ಪ್ರತಿಮೆ ಸ್ಥಾಪನೆ ಹಾಗೂ ಜಯಂತಿ ಆಚರಣೆಗೆ ಒಳಪಟ್ಟಿರುವ ಸಾಧಕರಾಗಿದ್ದಾರೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತರು, ಶೋಷಿತರು, ಹಿಂದುಳಿದವರು, ಮಹಿಳೆಯರು ಸಮಾಜದಲ್ಲಿ ಪ್ರಾಣಿಗಳಂತೆ ಬದುಕುತ್ತಿರುವುದನ್ನು ಬದಲಾಯಿಸಿ ಸಂವಿಧಾನ ಎಂಬ ಮಹಾಗ್ರಂಥವನ್ನು ನಾಡಿಗೆ ಅರ್ಪಿಸಿ ಸಮಾನತೆಯ ಜೊತೆಗೆ ಹಲವು ಹಕ್ಕುಗಳನ್ನು ತಂದು ಕೊಟ್ಟ ಮಹಾಪುರುಷ ಡಾ.ಬಿ.ಆರ್.ಅಂಬೇಡ್ಕರ್ ಎಂದರು.

ರಾಷ್ಟ್ರದ ಪ್ರತಿಯೊಬ್ಬರಿಗೂ ಅಸ್ತಿಯ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಜೊತೆಗೆ ಮಹಿಳೆಯರಿಗೆ ಸಮಾನತೆಯ ಕ್ಕು ತಂದುಕೊಟ್ಟ ಮಹಾ ನಾಯಕರು. ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಲ್ಲ, ಅವರೊಬ್ಬ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದು ವಿಶ್ಲೇಷಿಸಿದರು.ಪ್ರಗತಿಪರ ಚಿಂತಕ ಅರಕಲವಾಡಿ ನಾಗೇಂದ್ರ ಮಾತನಾಡಿ, ಜಗತ್ತಿನಾಧ್ಯಂತ ಹುಟ್ಟುಹಬ್ಬ ಆಚರಿಸಿಕೊಳ್ಳುವ ಏಕೈಕ ವ್ಯಕ್ತಿಯಾಗಿದ್ದಾರೆ. ಜಯಂತಿ ಆಚರಣೆಗೆ ಸೀಮಿತಗೊಳಿಸದೇ ಅವರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಜಾನಪದ ಕಲಾ ಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರು ಜನರು ನೀಲಿ ಬಾವುಟ ಪ್ರದರ್ಶನ ಮಾಡಿದ್ದು ಗಮನ ಸೆಳೆಯಿತು.ತಾಲೂಕು ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಿಎಸ್‌ಆರ್ ಅನುದಾನದಲ್ಲಿ 33 ಲಕ್ಷ ರು ವೆಚ್ಚದ ಸುಸರ್ಜಿತ ಚಿಕಿತ್ಸಾ ವಾಹನ ಹಾಗೂ ರಾಷ್ಟೀಯ ಆರೋಗ್ಯ ಅಭಿಯಾನ ಯೋಜನೆಯಡಿ 32 ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಸಂಚಾರಿ ತುರ್ತು ಚಿಕಿತ್ಸಾ ವಾಹನ ಸೇವೆಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸಿಡಿಪಿಒ ನಂಜಮಣಿ, ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ದೇವರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಸಿ. ಮಾಧು, ಸೆಸ್ಕಾಂ ಪ್ರೇಮ್‌ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯ ಶಶಿರಾಜ್ ಸೇರಿದಂತೆ ಇತರರು ಇದ್ದರು.