ಅಂಬೇಡ್ಕರ್ ಕಲ್ಲು ದೇವರಲ್ಲ, ಜೀವಂತ ದೇವರು

| Published : Dec 25 2024, 12:50 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕೂಡಲೇ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು.

ಕೊಟ್ಟೂರು: ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಹಿಂದುಳಿದ, ಅಲ್ಪ ಸಂಖ್ಯಾತರ ಮತ್ತು ರಾಷ್ಟ್ರದ ಜೀವಂತ ದೇವರಾಗಿ ಕಂಗೊಳಿಸಿದ್ದ ಮಹಾನ್ ವ್ಯಕ್ತಿ. ಇವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷುಲ್ಲಕವಾಗಿ ಮಾತನಾಡಿರುವುದು ಅಕ್ಷಮ್ಯ ಎಂದು ಜಿಲ್ಲಾ ಡಿ.ಎಸ್.ಎಸ್ ಸಂಚಾಲಕ ಬಿ.ಮರಿಸ್ವಾಮಿ ಖಂಡನೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ದಲಿತ ಮತ್ತಿತರರ ಸಂಘಟನೆಗಳಿಂದ ಆಯೋಜಿಸಿದ್ದ ಅಮಿತ್ ಶಾ ವಿರುದ್ಧದ ಪ್ರತಿಭಟನ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಬದಲಾಗಿ ಕಲ್ಲು ದೇವರನ್ನು ಸ್ಮರಿಸಿದರೆ ಪುಣ್ಯ ಬರುತ್ತದೆ ಎಂದು ಲೋಕಸಭೆಯಲ್ಲಿ ಅಮಿತ್ ಶಾ ಹೇಳಿಕೆ ನೀಡುವ ಮೂಲಕ ಮನುವಾದವನ್ನು ರಾಷ್ಟ್ರದ ಜನರಲ್ಲಿ ಪುನರ್ ಹರಡುವ ಕೆಲಸ ಮಾಡಿದ್ದಾರೆ. ಇವರ ಈ ತೆರನಾದ ಹೇಳಿಕೆ ಇಡೀ ರಾಷ್ಟ್ರವನ್ನು ಮತ್ತು ಸಂವಿಧಾನವನ್ನು ಅಪಮಾನಗೊಳಿಸುವುದಾಗಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಕೂಡಲೇ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು. ಇಲ್ಲದಿದ್ದರೆ ನಿರಂತರ ಪ್ರತಿಭಟನೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ತೆಗ್ಗಿನಕೇರಿ ಕೊಟ್ರೇಶ್, ವಕೀಲ ಹನುಮಂತಪ್ಪ, ಬದ್ದಿ ದುರುಗೇಶ್, ಅಜ್ಜಪ್ಪ ಮಾತನಾಡಿದರು.

ಇದಕ್ಕೂ ಮೊದಲು ಅಮಿತ್ ಶಾ ಹೇಳಿಕೆ ಖಂಡಿಸಿ ಮತ್ತು ರಾಜೀನಾಮೆಗೆ ಒತ್ತಾಯಿಸಿ ದಲಿತ ವಿವಿಧ ಸಂಘಟನೆಗಳು ಪ್ರತಿಭಟನೆ ಮೆರವಣಿಗೆಯನ್ನು ಪಟ್ಟಣದಲ್ಲಿ ಗಾಂಧಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಕೈಗೊಂಡು ನಂತರ ಬಸ್ ನಿಲ್ದಾಣ ವೃತ್ತದಲ್ಲಿ ಸಭೆ ನಡೆಸಿದರು. ನಂತರ ತಾಲೂಕು ಗೇಡ್ 2 ತಹಶೀಲ್ದಾರ್ ಎಂ.ಪ್ರತಿಭಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಂದಗಲ್ಲು ಪರುಶುರಾಮ್, ರೈತ ಸಂಘದ ಭರಮ್ಮಪ್ಪ, ಮಲ್ಲಿಕಾರ್ಜುನ್, ಕೆಗ್ಗರಾಜ್, ಮೈಲಾಪ್ಪ, ಕುಬೇರಪ್ಪ, ತಸ್ಲಿಂಬಾನು, ಭಾರತಿ ಸರಸ್ವತಿ, ಚಂದ್ರಶೇಖರ, ಎಚ್.ಕೊಲ್ಲಾರಪ್ಪ, ಮಹೇಶ್ ಪಿ., ರವಿ, ಪರುಶುರಾಮ್ ಮತ್ತಿತರರು ಭಾಗವಹಿಸಿದ್ದರು.