ಸಾರಾಂಶ
ಧಾರವಾಡ:
ನಾವಿಂದು ಅನುಭವಿಸುತ್ತಿರುವ ಸರ್ವ ಸ್ವತಂತ್ರಕ್ಕೆ ಸಂವಿಧಾನ ಕಾರಣವಾಗಿದ್ದರೆ, ಇಂತಹ ಸಂವಿಧಾನ ಪಡೆಯಲು ಬಿ.ಆರ್. ಅಂಬೇಡ್ಕರ್ ಮೂಲ ಕಾರಣ ಎಂದು ಮಂಗಳೂರು ವಿವಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಉಮೇಶ್ ಚಂದ್ರ ಎಂ.ಪಿ ಹೇಳಿದರು.ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸಿನೆಟ್ ಸಭಾಭವನದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿದ ಅವರು, ಸಂವಿಧಾನ ರಚನೆ ಮಾಡುವ ಜವಾಬ್ದಾರಿ ವಹಿಸಿಕೊಂಡ ಅಂಬೇಡ್ಕರ್ ಅನೇಕ ರೀತಿಯ ಕಷ್ಟ ಎದುರಿಸಿದರು. ಸಮಾಜದ ಘನತೆವೆತ್ತ ಸ್ಥಾನದಲ್ಲಿದ್ದವರಿಗೆ ಅನೇಕ ರೀತಿಯ ಕಿರುಕುಳ ನೀಡಿದ್ದು ದುಃಖಕರ ಸಂಗತಿ. ಏಕದ್ವಿತೀಯವಾಗಿ ನಿಂತು ಆಳವಾದ ಅಧ್ಯಯನದೊಂದಿಗೆ ಸುದೀರ್ಘ ವಿಮರ್ಶೆ ಮೂಲಕ ಪಡೆದ ಆಸ್ತಿ ಈ ಸಂವಿಧಾನ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಪ್ರಭಾರ ಕುಲಪತಿ ಡಾ. ಬಿ.ಎಂ. ಪಾಟೀಲ್, ಸಂವಿಧಾನದ ರಚನೆಯಲ್ಲಿ ಬಹಳಷ್ಟು ಜನ ಶ್ರಮಿಸಿದ್ದಾರೆ. ಅವರಲ್ಲಿ ಅಂಬೇಡ್ಕರ್ ಅವರ ಪಾತ್ರ ಪ್ರಮುಖ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮಹತ್ವ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದರು.ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿದರು. ಕುಲಸಚಿವ ಡಾ. ಎ. ಚೆನ್ನಪ್ಪ ಸಂವಿಧಾನದ ಪೀಠಿಕೆ ಓದಿದರು. ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ ನಗದು ಬಹುಮಾನ ನೀಡಲಾಯಿತು. ಕ್ರಾಂತಿ ಗೀತೆ ಹಾಡಿದ ಶರೀಫ್ ಶಡಂಬಿ ಹಾಗೂ ಡಾ. ಮನೋಜ್ ಡೊಳ್ಳಿ ಅವರನ್ನು ಗೌರವಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಶ್ಚಂದ್ರ ನಾಟೀಕಾರ, ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ಸಿಂಡಿಕೇಟ್ ಸದಸ್ಯರಾದ ರಾಬರ್ಟ್ ದದ್ದಾಪುರಿ, ಮಹೇಶ ಹುಲ್ಲಣ್ಣನವರ, ಬಸವರಾಜ ಗೊರವರ ಇದ್ದರು.