ಅಂಬೇಡ್ಕರ್ ಈ ದೇಶದ ಶೋಷಿತ ಸಮುದಾಯಗಳ ಶಕ್ತಿ: ಡಾ.ಶ್ರೀನಿವಾಸ್

| Published : Dec 09 2024, 12:45 AM IST

ಸಾರಾಂಶ

ಅಂಬೇಡ್ಕರ್ ಅವರು ಅನುಭವಿಸಿದ್ದು ನೊಂದವರ ನೋವು. ಅಂಬೇಡ್ಕರ್ ಪುಸ್ತಕ ಪ್ರೇಮಿಯಾಗಿದ್ದರು. ಜ್ಞಾನದ ಬಲದಿಂದ ಅಂಬೇಡ್ಕರ್ ಸಮಾಜದ ಅಂತರಂಗ ಅರಿತುಕೊಂಡು ಸಾಮಾಜಿಕ ಅಸಮಾನತೆ ಮತ್ತು ಶೋಷಣೆಗಳ ವಿರುದ್ಧ ಸಿಡಿದು ನಿಂತರು. ಅಂಬೇಡ್ಕರ್ ರೂಪಿಸಿದ ಸಂವಿಧಾನ ದೇಶದ ಅತ್ಮಶಕ್ತಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಡಾ.ಬಿ.ಆರ್.ಅಂಬೇಡ್ಕರ್ ಈ ದೇಶದ ಸಮಸ್ತ ಶೋಷಿತ ಸಮುದಾಯಗಳ ಶಕ್ತಿ ಹಾಗೂ ಸಮಾನತೆಯ ಸಂಕೇತ ಎಂದು ಪಾಂಡವಪುರ ಉಪ ವಿಭಾಗಧಿಕಾರಿ ಡಾ.ಶ್ರೀನಿವಾಸ್ ಬಣ್ಣಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ಅನುಭವಿಸಿದ್ದು ನೊಂದವರ ನೋವು. ಅಂಬೇಡ್ಕರ್ ಪುಸ್ತಕ ಪ್ರೇಮಿಯಾಗಿದ್ದರು. ಜ್ಞಾನದ ಬಲದಿಂದ ಅಂಬೇಡ್ಕರ್ ಸಮಾಜದ ಅಂತರಂಗ ಅರಿತುಕೊಂಡು ಸಾಮಾಜಿಕ ಅಸಮಾನತೆ ಮತ್ತು ಶೋಷಣೆಗಳ ವಿರುದ್ಧ ಸಿಡಿದು ನಿಂತರು ಎಂದರು.

ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಶೈಕ್ಷಣಿಕವಾಗಿ ನಾವು ಪ್ರಭಲರಾದಾಗ ಮಾತ್ರ ಶೋಷಣೆ ಮತ್ತು ಅಸಮಾನತೆಯಿಂದ ಬಿಡುಗಡೆಯಾಗಲು ಸಾಧ್ಯ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ಅಂಬೇಡ್ಕರ್ ರೂಪಿಸಿದ ಸಂವಿಧಾನ ದೇಶದ ಅತ್ಮಶಕ್ತಿ. ಸಂವಿಧಾನದ ಮೂಲಕ ಅಂಬೇಡ್ಕರ್ ದೇಶದ ದಮನಿತರಿಗೆ ಶಕ್ತಿ ನೀಡಿದರು. ಸಂವಿಧಾನ ಶ್ರೀರಕ್ಷೆಯಾಗಿರುವವರೆಗೂ ದೇಶದ ಅಂತಃಶಕ್ತಿ ಗಟ್ಟಿಯಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಸುಷ್ಮಾ, ಪುರಸಭೆ ಮುಖ್ಯಾಧಿಕಾರಿ ನಟರಾಜು, ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್, ಸಿಡಿಪಿಒ ಅರುಣಕುಮಾರ್, ಟಿಎಚ್‌ಒ ಡಾ.ಅಜಿತ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಗಳು ಮತ್ತು ಮುಖಂಡರಾದ ಜಿ.ಪಂ ಮಾಜಿ ಸದಸ್ಯ ರಾಮದಾಸ್, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ನಿವೃತ್ತ ಪ್ರಾಂಶುಪಾಲ ರಾಜಯ್ಯ, ಬಂಡೀಹೊಳೆ ರಮೇಶ್, ಮಾಂಬಳ್ಳಿ ಜಯರಾಂ, ಪೌರ ಕಾರ್ಮಿಕರ ಮುಖಂಡ ಬನ್ನಾರಿ, ಶಿವಣ್ಣ ಸೇರಿದಂತೆ ಹಲವರಿದ್ದರು.

ಸಂವಿಧಾನ ಕರಡು ಭಗವದ್ಗೀತೆಯಾಗಿದೆ: ಎಚ್.ಎಸ್.ನಾರಾಯಣ

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಡಾ.ಬಿ.ಆರ್.ಅಂಬೇಡ್ಕರ್ ಬದುಕು ನಿತ್ಯ ಪಾಠವಾದಲ್ಲಿ ದೇಶ ಶಾಂತಿಯ ತೋಟವಾಗಲಿದೆ ಎಂದು ಸಿಆರ್‌ಪಿ ಎಚ್.ಎಸ್. ನಾರಾಯಣ ತಿಳಿಸಿದರು.

ಪಟ್ಟಣದ ಸ್ಪಂದನಾ ಫೌಂಡೇಷನ್, ಶ್ರೀ ಬಾಲಾಜಿ ವಿದ್ಯಾಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಅಂಬೇಡ್ಕರ್‌ 68 ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿ, ಹುಟ್ಟಿನಿಂದ ಸಾಯವವರಿಗೆ ನೆಮ್ಮದಿ ಬದುಕಿಗೆ ಅಂಬೇಡ್ಕರ್‌ ಅವರ ಸಂವಿಧಾನ ಕರಡು ಭಗವದ್ಗೀತೆಯಾಗಿದೆ ಎಂದರು.

ಅಕ್ಷರ ಕ್ರಾಂತಿ ದುರ್ಬಲ ಸಮುದಾಯದ ಅಸ್ತ್ರವಾಗಬೇಕು. ಸಮಬಾಳು, ಸಮಪಾಲು ಎಲ್ಲರಿಗೂ ಪ್ರಾಮಾಣಿಕವಾಗಿ ಸಿಗಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಹೆಣ್ಣು ಮಕ್ಕಳ ಸುರಕ್ಷತೆ ನಿರ್ಮಿಸಿರುವ ಕಾನೂನುಗಳು ಅಂಬೇಡ್ಕರ್‌ ಅವರ ಕೊಡುಗೆಯಾಗಿದೆ ಎಂದರು.

ನಮ್ಮ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಶಿಕ್ಷಣ ಭವಿಷ್ಯದ ಮಕ್ಕಳಿಗೆ ಅಸ್ತ್ರವಾಗಬೇಕು. ಓದುವ ಮಕ್ಕಳು ಬಾಲ ಕಾರ್ಮಿಕರಾಗಬಾರದು ಎಂದು ಕಡ್ಡಾಯ ಶಿಕ್ಷಣ ಕಾನೂನು ತಂದಿದ್ದಾರೆ. ದೇಶದ ಶಾಂತಿ, ನೆಮ್ಮದಿಗಾಗಿ ಕಾನೂನು ರಕ್ಷಣೆಯ ಅಸ್ತ್ರವನ್ನು ಪ್ರಜಾಪ್ರಭುತ್ವದಲ್ಲಿ ನೀಡಿದರು. ಇದನ್ನು ಉಲ್ಲಂಘಿಸಿದರೆ ಶಿಕ್ಷೆ ಎಂದು ಎಚ್ಚರಿಸಲು ನ್ಯಾಯಾಲಯಗಳಿವೆ. ಇವರ ರಚಿಸಿದ ಸಂವಿಧಾನ ಕರಡು ಭಗವದ್ಗೀತೆಯಾಗಿದೆ ಎಂದರು.

ಇದೇ ವೇಳೆ ಅಂಬೇಡ್ಕರ್‌ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು. ಟ್ರಸ್ಟಿ ತ್ರಿವೇಣಿ, ಸಮಾಜ ಸೇವಕಿ ಕವಿತಾ ಮತ್ತಿತರರಿದ್ದರು.