ಗುಂಡ್ಲುಪೇಟೇಲಿ ಅಂಬೇಡ್ಕರ್‌ ಜಯಂತಿ ಆಚರಣೆ

| Published : Aug 20 2024, 12:51 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ೧೩೩ನೇ ಜಯಂತ್ಯುತ್ಸವದಲ್ಲಿ ಬೆಳ್ಳಿ ರಥದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಚಾಲನೆ ನೀಡಿದರು.

ಭೀಮೋತ್ಸವಕ್ಕೆ ಚಾಲನೆ । ಬೆಳ್ಳಿರಥದಲ್ಲಿ ಅಂಬೇಡ್ಕರ್‌ ಪ್ರತಿಮೆ

ಗುಂಡ್ಲುಪೇಟೆ: ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ೧೩೩ನೇ ಜಯಂತ್ಯುತ್ಸವದಲ್ಲಿ ಬೆಳ್ಳಿ ರಥದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಭೀಮೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆರಂಭಗೊಂಡ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಹೊತ್ತ ಅಲಂಕೃತ ಬೆಳ್ಳಿರಥಕ್ಕೆ ಚಾಮರಾಜನಗರ ನಳಂದ ವಿಶ್ವ ವಿದ್ಯಾಲಯದ ಭೋದಿದತ್ತ ಮಹಾಥೇರಾ ಸಾನಿಧ್ಯದಲ್ಲಿ ಮಾಜಿ ಸಂಸದ ಎ.ಸಿದ್ದರಾಜು ಅಧ್ಯಕ್ಷತೆಯಲ್ಲಿ ಮೆರವಣಿಗೆಗೆ ಚಾಲನೆ ಸಮಯದಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಇದ್ದರು.

ಡಿ.ದೇವರಾಜ ಅರಸು ಕ್ರೀಡಾಂಗಣದಿಂದ ಹೊರಟ ಭೀಮೋತ್ಸವ ಮೆರವಣಿಗೆ ಮೈಸೂರು-ಊಟಿ ಹೆದ್ದಾರಿ ಮೂಲಕ ನೆಹರು ಪಾರ್ಕ್‌, ಕೆಆರ್‌ಸಿ ರಸ್ತೆ ಮೂಲಕ ಚಾಮರಾಜನಗರ ರಸ್ತೆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾಗಿ ಬಂದು ಕೊನೆಗೊಂಡಿತು.

ಮೆರವಣಿಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹೊತ್ತ ವಾಹನಗಳು,ಬ್ಯಾಂಡ್ ಸೆಟ್, ಮಂಗಳವಾದ್ಯ,ಕಂಸಾಳೆ, ಡೊಳ್ಳು ಕುಣಿತ, ತಮಟೆ, ಮಹಿಳೆ ನಗಾರಿ, ಗೊರವನ ಕುಣಿತ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.

ಮೆರವಣಿಗೆಯಲ್ಲಿ ತಾಲೂಕಿನ ಯುವಕರು ಹಾಗೂ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿ ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು.

ಮೆರವಣಿಗೆ ಚಾಲನೆ ವೇಳೆ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಯಂತ್ಯುತ್ಸವದ ಆಯೋಜಕರಾದ ಗೋಪಾಲ್‌ ಹೊರೆಯಾಲ, ಡಾ.ನವೀನ್ ಮೌರ್ಯ, ಜಿಪಂ ಮಾಜಿ ಸದಸ್ಯ ಬೊಮ್ಮಯ್ಯ, ಮುಖಂಡರಾದ ಸುಭಾಷ್ ಮಾಡ್ರಹಳ್ಳಿ, ಆರ್.ಸೋಮಣ್ಣ, ಸೋಮಹಳ್ಳಿ ರವಿ,ಡಿ.ಉಲ್ಲಾಸ್‌, ಮುತ್ತಣ್ಣ ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು.