ಸಮಾಜದ ಹಿರಿಯರಿಂದ ಅಡ್ಡಿ ಸಾಧ್ಯತೆ, ಹಿರಿಯರು ನಮ್ಮ ಭಾವನೆ ಅರ್ಥೈಸಿಕೊಳ್ಳಲಿ ಎಂದು ಉಮೇಶ ಸ್ವಾರಳ್ಳಿಕರ್‌ ಹೇಳಿದರು. ಡಾ. ಅಂಬೇಡ್ಕರ್‌ 133ನೇ ಜಯಂತಿ ಅದ್ಧೂರಿ ಆಚರಣೆಗೆ ಏ.14ರಂದು ನಿರ್ಧಾರ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಡಾ. ಅಂಬೇಡ್ಕರ್‌ 133ನೇ ಜಯಂತಿ ಅದ್ಧೂರಿ ಆಚರಣೆಗೆ ಏ.14ರಂದು ನಿರ್ಧಾರ ಮಾಡಲಾಗಿದ್ದು ಸಮಾಜದ ಹಿರಿಯರಿಂದ ಸಹಕಾರ ಕೋರಿದ್ದು ಎಲ್ಲರ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ಸ್ವಾರಳ್ಳಿಕರ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲಿ ಯಾರಿಂದಲೂ ಚಂದಾ ಎತ್ತದೆ ಸಮಾಜದ ಹಿರಿಯರು, ಮುಖಂಡರೆ ಹಣ ಹಾಕಿ ಜಯಂತಿ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಆದರೆ ಜಯಂತಿ ಆಚರಣೆ ವಿಷಯವಾಗಿ ಸಮಾಜದ ಕೆಲ ಹಿರಿಯರು ಅನಗತ್ಯವಾಗಿ ಅಡ್ಡಿಪಡಿಸಲು ಮುಂದಾಗಿದ್ದಾರೆ. ಯುವಕರೆಲ್ಲ ಸೇರಿ ಜಯಂತಿ ಆಚರಣೆಗೆ ಸಿದ್ಧತೆ ನಡೆಸಿರುವಾಗ ಮತ್ತೊಂದು ಪ್ರತ್ಯೇಕ ಸಭೆ ಕರೆದಿರುವುದು ವಿಷಾದನೀಯ ಎಂದರು.

ಕಳೆದ 35 ವರ್ಷಗಳಿಂದ ಜಯಂತಿ ಸಂದರ್ಭದಲ್ಲಿ ಅನೇಕ ಜವಾಬ್ದಾರಿಗಳನ್ನು ಹೊತ್ತು ಕಾರ್ಯ ಮಾಡಿದ್ದೇವೆ. ಯುವಕರಿಗೂ ಜವಾಬ್ದಾರಿ ನೀಡಿ ಎಂದರೆ ಇಂದಿಗೂ ನೀಡುತ್ತಿಲ್ಲ. ಸಭೆಗೆ ಕರೆದರೆ ಅಲ್ಲಿದ್ದೇವೆ ಇಲ್ಲಿದ್ದೇವೆ ಎಂದು ನೆಪ ಹೇಳಿ ಸಭೆಗೂ ಹಾಜರಾಗಿಲ್ಲ. ನೀವು ಹೀಗೆ ಮಾಡಿದರೆ ಸಮಾಜ ನಿಮಗೆ ಛೀಮಾರಿ ಹಾಕುತ್ತದೆ ಎಂದು ಉಮೇಶ ತಮ್ಮ ಅಸಮಾಧಾನ ಹೊರಹಾಕಿದರು.

ಡಾ. ಬಿಆರ್‌ ಅಂಬೇಡ್ಕರ್‌ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ ಮಾತನಾಡಿ, ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ ಉತ್ಸವವನ್ನು ಏ.14ರಂದು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಪ್ರಯುಕ್ತ ಐದು ದಿನಗಳ ಕಾಲ ನಗರದಲ್ಲಿ ರಂಗೋಲಿ, ಪ್ರಬಂಧ, ರಸಪ್ರಶ್ನೆ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಈ ಬಾರಿ ಯಾರಿಗೂ ಕೈಚಾಚದೇ ಸಮಾಜದ ಉನ್ನತ ಸ್ಥಾನದಲ್ಲಿರುವ ಗಣ್ಯರ ಹತ್ತಿರ ಧನ ಸಹಾಯ ಪಡೆದು ಅಂಬೇಡ್ಕರ್‌ ಜಯಂತಿ ಯಶಸ್ವಿಯಾಗಿ ಮಾಡಿ ತೋರಿಸುತ್ತೇವೆ. ಸಮಾಜದ ಹಿರಿಯರಾದ ಅನೀಲಕುಮಾರ ಬೆಲ್ದಾರ ಅವರು ದಯವಿಟ್ಟು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.

ಮೆರವಣಿಗೆ ಸಮಿತಿ ಅಧ್ಯಕ್ಷ ರಾಹುಲ್‌ ಡಾಂಗೆ ಮಾತನಾಡಿ, ಸುಮಾರು 200 ಯುವಕರನ್ನೊಳಗೊಂಡಂತೆ ಜನವಾಡಾ ರಸ್ತೆಯಲ್ಲಿರುವ ಡಾ. ಅಂಬೇಡ್ಕರ್‌ ಭವನದಲ್ಲಿ ಸಭೆ ಕರೆದಿದ್ದೆ. ಇಲ್ಲಿ ಸರ್ವಾನುಮತದಿಂದ ಉಮೇಶ ಸ್ವಾರಳ್ಳಿಕರ್‌ ಅವರನ್ನು ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಸಮಾಜದ ಹಿರಿಯರಿಗೆ ಕರೆದರೂ ಮುಂದೆ ಬರುತ್ತಿಲ್ಲ. ಯುವಕರಿಗೆ ಸಹಕಾರ ನೀಡುತ್ತಿಲ್ಲ. ದಯವಿಟ್ಟು ಸಹಕಾರ ನೀಡಬೇಕೆಂದು ಕೋರಿದರು.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್‌, ಖಜಾಂಚಿ ವಿನೋದ ಬಂದಗೆ, ಮಹಿಳಾ ಸಮಿತಿ ಅಧ್ಯಕ್ಷೆ ಸುಧಾಮಣಿ ಗುಪ್ತಾ, ಮೆರವಣಿಗೆ ಸಮಿತಿ ಉಪಾಧ್ಯಕ್ಷ ರವಿ ಭೂಸಂಡೆ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಡೊಂಗರೆ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪ್ರಕಾಶ ರಾವಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.