ಅಂಬೇಡ್ಕರ್ ಜಯಂತಿ: ತಾಲೂಕು ಆಡಳಿತದಿಂದ ಲೋಪ

| Published : Apr 15 2025, 12:51 AM IST

ಸಾರಾಂಶ

ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿ, ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಗೌರವ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡುರಾಷ್ಟ್ರದ್ಯಾಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮೀಸಲು ಕ್ಷೇತ್ರವಾದ ನಂಜನಗೂಡಿನಲ್ಲಿ ತಾಲೂಕು ಆಡಳಿತದಿಂದ ಜಯಂತಿ ಆಚರಸಿ ಗೌರವ ಸಲ್ಲಿಸದೆ ತಾತ್ಸಾರ ಮಾಡಲಾಗಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಆರೋಪಿಸಿದರು.ಸೋಮವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ಅಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿ, ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಗೌರವ ನೀಡಲಾಗುತ್ತಿದೆ. ಆದರೆ ನಂಜನಗೂಡು ತಾಲೂಕು ಆಡಳಿತ ಪ್ರತೀತಿಯಂತೆ ತಾಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ಅದ್ದೂರಿಯಾಗಿ ಮೆರವಣಿಗೆ ನಡೆಸಿ, ವೇದಿಕೆ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ಅಂಬೇಡ್ಕರ ಜಯಂತಿಗೂ ಮೊದಲು ಪಕ್ಷಾತೀತವಾಗಿ ಪೂರ್ವಬಾವಿ ಸಭೆ ಕರೆದು ಜನರ ಸಲಹೆ ಪಡೆದು ಕಾರ್ಯಕ್ರಮ ರೂಪಿಸಬೇಕು. ಆದರೆ ಈ ಬಾರಿ ಸಂಪ್ರದಾಯವನ್ನು ಬದಿಗೊತ್ತಿ ರಾಷ್ಟ್ರ ನಾಯಕರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದರು.ಕಾರ್ಯಕ್ರಮ ಆಯೋಜನೆಗೆ ಹಣದ ತೊಂದರೆ ಇದ್ದರೆ ಚಂದಾ ಎತ್ತಿ ಆಯೋಜನೆ ಮಾಡಬಹುದಿತ್ತು. ಯಾರೋ ಬೆಂಗಳೂರಿನಿಂದ ಬರುವವರಿಗಾಗಿ ಬೇರೊಂದು ದಿನ ಕಾರ್ಯಕ್ರಮ ಆಯೋಜಿಸಿ ಅಂಬೇಡ್ಕರ್ ಅವರನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಅಲ್ಲದೆ ಅವರ ಪರಿನಿಬ್ಬಾಣ ದಿನದಂದು ಫುಟ್ಬಾಲ್ ಪಂದ್ಯಾವಳಿ ಆಯೋಜಿಸುತ್ತಾರೆ. ಇದು ಶಾಸಕರು ಅಂಬೇಡ್ಕರ್ ಅವರಿಗೆ ಕೊಡುವ ಗೌರವವಾಗಿದೆ ಎಂದು ಹೇಳಿದರು.ದಸಂಸ ಸಂಚಾಲಕ ಶಂಕರಪುರ ಸುರೇಶ್ ಮಾತನಾಡಿ, ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆ ಹಾಗೂ ಮಂಟಪವನ್ನು ಅಂಬೇಡ್ಕರ್ ಜಯಂತಿ ಇದ್ದರೂ ಸ್ವಚ್ಛಗೊಳಿಸಿಲ್ಲ. ಗೋಪುರಕ್ಕೆ ಜೇಡರ ಬಲೆ ಕಟ್ಟಿಕೊಂಡಿದೆ. ತಾಲೂಕು ಆಡಳಿತ ಈ ರೀತಿ ಅಸಡ್ಡೆ ತೋರಬಾರದು ಎಂದು ಆರೋಪಿಸಿದರು.ಕಾರ್ಯಕ್ರಮದ ನಂತರ ಬಿಜೆಪಿ ಮುಖಂಡ ಬಿ. ಹರ್ಷವರ್ಧನ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಲಘು ಉಪಾಹಾರ ವಿತರಿಸಿದರು. ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯ್ಕ, ನಗರಸಭೆ ಸದಸ್ಯ ಸಿದ್ದರಾಜು, ಮಂಡ್ಯ ಮಹದೇವು, ಉಮೇಶ್, ಬಾಲಚಂದ್ರ ಇದ್ದರು. ತಹಸೀಲ್ದಾರ್‌ ಸ್ಪಷ್ಟನೆಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಅಂಬೇಡ್ಕರ ಜಯಂತಿ ಆಚರಣೆ ಬಗ್ಗೆ ನಡೆಸಿದ ಪೂರ್ವಬಾವಿ ಸಭೆಯಲ್ಲಿ ಮುಖಂಡರು ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಿ, ಮತ್ತೊಂದು ದಿನ ಅದ್ದೂರಿ ಮೆರವಣಿಗೆ, ವೇದಿಕೆ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಹೀಗಾಗಿ ಈ ದಿನ ಸರಳವಾಗಿ ಆಚರಿಸಲಾಗಿದೆ. ಶೀಘ್ರದಲ್ಲಿ ದಿನಾಂಕ ನಿಗದಿಪಡಿಸಿ ಜಯಂತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.---------------- eom/mys/dnm/