ಸಾರಾಂಶ
ಕೋಟನೂರ(ಡಿ) ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅಪಮಾನ ಮಾಡಿರುವ ಘಟನೆಗೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 18/24 ಕಲಂ 295 ಐ.ಪಿ.ಸಿ ಹಾಗೂ 3(1)(ಯು)(ವಿ)(ಟಿ) ಎಸ್ಸಿ- ಎಸ್ಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ಕೋಟನೂರ(ಡಿ) ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅಪಮಾನ ಮಾಡಿರುವ ಘಟನೆಗೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 18/24 ಕಲಂ 295 ಐ.ಪಿ.ಸಿ ಹಾಗೂ 3(1)(ಯು)(ವಿ)(ಟಿ) ಎಸ್ಸಿ- ಎಸ್ಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.ಸೂಕ್ತ ತನಿಖೆ ಹಾಗೂ ವಿಚಾರಣೆಯ ನಂತರ ಕಿರಣ (26), ಹನುಮಂತ (25), ಮನ್ನು (31) ಹಾಗೂ ಸಂಗಪ್ಪ ಅಲಿಯಾಸ್ ಸಂಗಮೇಶ (36) ಹೆಸರಿನ 4 ಜನ ಆಪಾದಿತರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್. ಚೇತನ್ ಹೇಳಿದ್ದಾರೆ.
ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳವರು ಯಾವುದೇ ಕಾರಣಕ್ಕೂ ಉದ್ವೇಗಕ್ಕೊಳಗಾಗಬಾರದು, ಜಿಲ್ಲಾಡಳಿತದ ಹಾಗೂ ಪೊಲೀಸ್ ಜೊತೆ ಸಹಕರಿಸಬೇಕು ಹಾಗೂ ಶಾಂತತೆಯನ್ನು ಕಾಪಾಡಲು ಆಯುಕ್ತರು ಕೋರಿದ್ದಾರೆ.ಪ್ರಕರಣದ ಹಿನ್ನೆಲೆಯಲ್ಲಿ ಏಕಾಏಕಿ ಪ್ರತಿಭಟನೆ, ರಾಸ್ತಾರೋಕೋದಂತಹ ಬೆಳವಣಿಗೆಗಳು ಮಂಗಳವಾರ ಇಡೀ ನಗರದಾದ್ಯಂತ ಹರಡಿದ್ದರಿಂದ ಇಡೀ ನಗರದಲ್ಲಿ ನಿನ್ನೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬುಧವಾರ ನಗರದಲ್ಲಿ ಎಂದಿನಂತೆ ಶಾಂತಿ ನೆಲೆಸಿದೆ. ವಾಹನ ಸಂಚಾರ ಏಂದಿನಂತೆ ಸಾಗಿದೆ.
ಮಂಗಳವಾರ ಘಟನೆಯ ನಂತರ ತಕ್ಷಣ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸ್ಪಂದಿಸಿದ್ದಲ್ಲದೆ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿ ಪ್ರತಿಮೆಗೆ ಗೌರವ ನಮನ, ಪುಷ್ಪ ಸಮರ್ಪಣೆ ಮಾಡಿ ಬಂದಿದ್ದರು.ಡಿಸಿಯವರ ಸೂಕ್ತ ಸಮಯದಲ್ಲಿನ ಮಧ್ಯಸ್ಥಿಕೆಯ ನಂತರವೂ ಕೆಲವು ಕಿಡಿಗಿಡೇಗಿಗಳ ಗುಂಪು ಸೂಪರ್ ಮಾರ್ಕೆಟ್, ಜಗತ್, ಹುಮ್ನಾಬಾದ್ ಬೇಸ್, ಸರ್ದಾರ್ ಪಟೇಲ್ ವೃತ್ತ ಸೇರಿದಂತೆ ಪ್ರಮುಖ ಹಾಗೂ ಜನ, ವಾಹನ ದಟ್ಟಣೆಯ ಪ್ರದೇಶಗಳಿಗೆ ತೆರಳಿ ಅಲ್ಲೆಲ್ಲಾ ಗಲಾಟೆ ಮಾಡಿದ್ದಲ್ಲದೆ ಕಲ್ಲು ತೂರಿ ಸಾಕಷ್ಟು ಹಾನಿ ಉಂಟು ಮಾಡಿದ್ದರು.
ಈ ರೀತಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಇದುವರೆಗೂ ಯಾರ ವಿರುದ್ಧವೂ ಯಾವುದೇ ತೆರನಾದಂತಹ ಪ್ರಕರಣಗಳನ್ನು ದಾಖಲಿಸಿಲ್ಲ.