ಸಾರಾಂಶ
ಅಂಬೇಡ್ಕರ್ ಜನ್ಮದಿನ । ಸಂವಿಧಾನ ಪೀಠಿಕೆ ಬೋಧನೆ । ಎಸ್‌ಸಿ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಅಂಬೇಡ್ಕರ್ ಆಶಯದಂತೆ ಶಿಕ್ಷಣದಿಂದ ಜ್ಞಾನ, ಹೋರಾಟದಿಂದ ಹಕ್ಕುಗಳು, ಸಂಘಟನೆಯಿಂದ ಶಕ್ತಿ ಪಡೆದುಕೊಳ್ಳುವ ಮಾರ್ಗದಲ್ಲಿ ನಡೆಯುವುದು ನವ ಭಾರತ ನಿರ್ಮಾಣದ ಪ್ರಥಮ ಹೆಜ್ಜೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಕೇವಲ ಸಮಾಜ ಸೇವಕರಲ್ಲ, ಭಾರತದ ಪುನರ್ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾತ್ಮ. ಶೋಷಿತರಿಗೆ ಧೈರ್ಯ, ಶಿಕ್ಷಣ, ಆತ್ಮಗೌರವ ಮತ್ತು ನ್ಯಾಯದ ಮಾರ್ಗವನ್ನು ತೋರಿದ ದಾರಿದೀಪ. ಅವರು ಅಧ್ಯಕ್ಷರಾಗಿದ್ದ ಕರಡು ಸಮಿತಿಯ ಮಾರ್ಗದರ್ಶನದಲ್ಲಿ ರೂಪುಗೊಂಡ ನಮ್ಮ ಸಂವಿಧಾನ ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿಗತ ಹಕ್ಕುಗಳನ್ನು ನೀಡುವ ಪವಿತ್ರ ಗ್ರಂಥವಾಗಿದೆ ಎಂದರು.
12ನೇ ಶತಮಾನದಲ್ಲಿ ಈ ಭೂಮಿಯಲ್ಲಿ ಸಮಾನತೆಯ ಸಂದೇಶ ಸಾರಿ ಹೋಗಿದ್ದ ಮಹಾ ಮಾನವತಾವಾದಿ ಬಸವಣ್ಣ ಮತ್ತು 20ನೆಯ ಶತಮಾನದಲ್ಲಿ ಅದೇ ಸಂದೇಶವನ್ನು ಜಾರಿಗೊಳಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಇಬ್ಬರಲ್ಲೂ ಹಲವು ಸಾಮ್ಯತೆಗಳು ಕಾಣುತ್ತವೆ ಎಂದರು.ಅಂಬೇಡ್ಕರ್ ಜೀವಿತದುದ್ದಕ್ಕೂ ಯಾರನ್ನೂ ದ್ವೇಷಿಸಲಿಲ್ಲ, ಯಾರ ಹಕ್ಕುಗಳನ್ನು ಅಧಿಕಾರವನ್ನು, ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಮನುಷ್ಯನಾಗಿ ಹುಟ್ಟಿದವರು ಹೇಗೆ ಬದುಕಬಹುದು ಎಂದು ತೋರಿಸುವ ಮೂಲಕ ಇಡೀ ಮಾನವ ಕುಲಕ್ಕೆ ಆದರ್ಶರಾದರು ಎಂದು ಹೇಳಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, 1927ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಧೃಢ ನಿರ್ಧಾರ ಕೈಗೊಂಡು ಮನಸ್ಮೃತಿ ಎನ್ನುವ ಅಲಿಖಿತ ಸಂವಿಧಾನವನ್ನು ಸುಟ್ಟು ಹಾಕಿದರು. ವಿದ್ಯಾಭ್ಯಾಸದಿಂದ ಅಂಬೇಡ್ಕರ್ ಗಳಿಸಿದ ವಿದ್ವತ್ ಇಂತಹ ಧೃಡ ನಿರ್ಧಾರ ಕೈಗೊಳ್ಳಲು ಕಾರಣವಾಯಿತು. ದೇಶದ ಸಂವಿಧಾನ ರಚನೆ ಮಾಡಿ, ದೇಶದಲ್ಲಿ ಜಾರಿಯಾದ ಮೇಲೂ ಅಂಬೇಡ್ಕರ್ ರಚಿಸಿದ ಸಂವಿಧಾನ ಒಪ್ಪದಂತೆ ವಿರೋಧಿಸಿ ಅಂದಿನ ಕಾಲದಲ್ಲಿ ಚಳವಳಿಯನ್ನು ಸಹ ನಡೆಸಲಾಯಿತು. ಇಂದಿಗೂ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದಲೇ ಇಂದು ನಾವೆಲ್ಲರೂ ಜಾತಿ ಪದ್ದತಿ ಮೀರಿ, ವಿದ್ಯಾಭ್ಯಾಸ ಹೊಂದಿ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಿದೆ ಎಂದರು.
ಚಳ್ಳಕೆರೆ ಕೋಟೆ ಬೋರಮ್ಮ ಪಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಸಂಜೀವ್ ಕುಮಾರ್ ಪೋತೆ ಉಪನ್ಯಾಸ ನೀಡಿದರು. ಭಾರತ ಸಂವಿಧಾನದ ಪೀಠಿಕೆಯನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಬೋಧಿಸಿದರು.ವಿವಿಧ ಸಂಘಟನೆಗಳ ಮೂಲಕ ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿ, ಜನಸೇವೆಗೈದ ಪರಿಶಿಷ್ಟ ಜಾತಿಯ ವಿವಿಧ ಮುಖಂಡರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ನಗರಸಭೆ ಪೌರಾಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಲಿಡ್ಕರ್ ಮಾಜಿ ಅಧ್ಯಕ್ಷ ಶಂಕರ್ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))