ಸಾರಾಂಶ
ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ದೇಶಕ್ಕೆ ನೀಡಿರುವ ಮಹತ್ತರ ಕೊಡುಗೆಗಳನ್ನು ಸದಾ ಸ್ಮರಿಸಬೇಕು ಎಂದು ಪ್ರೊ.ಮಂಜುನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ಕನಕಪುರ
ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ದೇಶಕ್ಕೆ ನೀಡಿರುವ ಮಹತ್ತರ ಕೊಡುಗೆಗಳನ್ನು ಸದಾ ಸ್ಮರಿಸಬೇಕು ಎಂದು ಪ್ರೊ.ಮಂಜುನಾಥ್ ಹೇಳಿದರು. ನಗರದ ರೂರಲ್ ಪದವಿ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ಅಂಬೇಡ್ಕರ್ ಕೀರ್ತಿ ಪಸರಿಸಿದೆ. ಅವರು ರಚಿಸಿರುವ ಸಂವಿಧಾನ ವಿಶ್ವಕ್ಕೆ ಮಾದರಿ. ಸ್ವಾತಂತ್ರ್ಯ, ಸಮಾನತೆ, ಜಾತಿ ತತ್ವಗಳ ವಿರುದ್ಧ ನೆಮ್ಮದಿಯಾಗಿ ಬದುಕುವಂತೆ ಮಾಡಿದೆ ಎಂದು ಹೇಳಿದರು. ಸಂವಿಧಾನದಲ್ಲಿ ಭಾರತೀಯ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಬಂಧನೆಗಳನ್ನು ತಂದರು. 1947ರಲ್ಲಿ ಸ್ವಾತಂತ್ರ್ಯ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿ ಹಿಂದೂ ವೈಯಕ್ತಿಕ ಕಾನೂನು ಸುಧಾರಿಸಲು ಮತ್ತು ಮಹಿಳೆಯರಿಗೆ ಸಮಾನ ಹಕ್ಕು ತರಲು, ಹಿಂದೂ ಸಂಹಿತೆ ಮಸೂದೆ ಪರಿಚಯಿಸಲು ಸಂಸತ್ತಿನಲ್ಲಿ ಪ್ರಯತ್ನಿಸಿ ವಿಫಲವಾದ ಕಾರಣ ತಮ್ಮ ಘನತೆವೆತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕೈಕ ದಿಟ್ಟ ನಾಯಕ ಅಂಬೇಡ್ಕರ್ ಮಾತ್ರ. ಅವರು ಭಾರತಕ್ಕೆ ಕೊಟ್ಟ ಸಂವಿಧಾನದ ಕೊಡುಗೆ ಅಜರಾಮರ ಎಂದರು.ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ ಮಾತನಾಡಿ, ಅಂಬೇಡ್ಕರ್ ಸಂವಿಧಾನವನ್ನು ಅತಿ ಜಾಗೃತವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಅವರ ಆಶಯಕ್ಕೆ ತಕ್ಕಂತೆ ಜೀವನ ರೂಪಿಸಿಕೊಳ್ಳಬೇಕಿದೆ. ಯುವ ಸಮೂಹ ಸಂವಿಧಾನದ ಹಕ್ಕುಗಳು ಮತ್ತು ಕರ್ತವ್ಯಗಳನ್ನ ಅರಿತು ನಡೆದರೆ ಮಾತ್ರ ಭಾರತದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ದೇವರಾಜು, ಡಾ.ತಮ್ಮಣ್ಣಗೌಡ, ಬಿ.ಎಂ.ಶ್ರೀನಿವಾಸ್, ಎಚ್.ಕೆ.ಮಂಜುನಾಥ್, ದೀಪಿಕಾ, ಪ್ರಸನ್ನ, ಸುಮನ್, ಅಪ್ಪಾಜಿ, ವಿಜಯೇಂದ್ರ ಹಾಗ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮೋಹನ್ ಕುಮಾರ್ ಇತರರು ಹಾಜರಿದ್ದರು.