ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶ್ವದ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ಭಾರತವು ಪ್ರಗತಿ ಪಥದತ್ತ ಸಾಗುವಲ್ಲಿ ಅಂಬೇಡ್ಕರ್ ಕೊಡುಗೆ ಹೆಚ್ಚಿನದ್ದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೈವಿಧ್ಯತೆಯಿಂದ ಕೂಡಿರುವ ರಾಷ್ಟ್ರಕ್ಕೆ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ರಾಷ್ಟ್ರಕ್ಕೆ ಉತ್ತಮ ಸಂವಿಧಾನ ನೀಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಐಶ್ವರ್ಯ ಹೇಳಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗ ಸ್ತಂಭಗಳಾಗಿದ್ದು, ಸಂವಿಧಾನ ಆಶಯಗಳನ್ನು ಸಂರಕ್ಷಿಸುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ ಎಂದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಬೆಳವಣಿಗೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಸ್ವಾತಂತ್ರ್ಯ ನಂತರ ಸಂವಿಧಾನ ಸಮರ್ಪಣೆ ಮಾಡಿಕೊಂಡು ಪ್ರತಿಯೊಬ್ಬರಿಗೂ ಸಮಾನತೆ, ಸಮಾನ ಅವಕಾಶಗಳು ಲಭ್ಯವಾಗುತ್ತಿವೆಯೇ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಮನುಷ್ಯ ಮನುಷ್ಯನನ್ನು ಗೌರವಿಸಬೇಕು. ಮಹಿಳೆಯರು ಸೇರಿದಂತೆ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂಬುದನ್ನು ಅಂಬೇಡ್ಕರ್ ಒತ್ತಿ ಹೇಳಿದ್ದಾರೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಪ್ರತಿ ನಿತ್ಯ ಸ್ಮರಿಸಬೇಕು. ಧ್ವನಿ ಇಲ್ಲದವರಿಗೆ ಅವಕಾಶಗಳು ತಲುಪಬೇಕು ಎಂದು ಸುಂದರ್ ರಾಜ್ ತಿಳಿಸಿದರು.
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಅಂಬೇಡ್ಕರ್ ಸತತ ಪ್ರಯತ್ನ ಮತ್ತು ಸರ್ವ ಸಮರ್ಪಣಾ ಭಾವದಿಂದ ಜಗತ್ತಿನ ಅತೀ ಶ್ರೇಷ್ಠ ಸಂವಿಧಾನವನ್ನು ರಾಷ್ಟ್ರಕ್ಕೆ ನೀಡಿದ್ದಾರೆ ಎಂದರು.ಸಂವಿಧಾನ ಜಾರಿಗೆ ಬಂದಾಗ 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳಿದ್ದವು. ಪ್ರಸ್ತುತ 450 ವಿಧಿಗಳು, 12 ಅನುಸೂಚಿಗಳು ಹಾಗೂ 25 ಭಾಗಗಳನ್ನು ಒಳಗೊಂಡಿದೆ ಎಂದು ಪ್ರಕಾಶ್ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾತನಾಡಿ, ಅಂಬೇಡ್ಕರ್ ಅವರ ದೂರದೃಷ್ಟಿ, ಅಗಾಧ ಜ್ಞಾನ ರಾಶಿ ಹಾಗೂ ಪರಿಕಲ್ಪನೆ ರಾಷ್ಟ್ರದ ಅಭಿವೃದ್ಧಿಗೆ ಪ್ರಸ್ತುತ ಎಂದರು.ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ರೇಖಾ ಭಾರತದ ಸಂವಿಧಾನದ ಪೀಠಿಕೆ ವಾಚಿಸಿದರು. ತಹಸೀಲ್ದಾರ್ ಪ್ರವೀಣ್ ಕುಮಾರ್, ಜಿ.ಪಂ.ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ಪೌರಾಯುಕ್ತ ಎಚ್.ಎನ್.ರಮೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ, ತಾಲೂಕು ಸಂಚಾಲಕ ದೀಪಕ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಖಜಾನಾ ಇಲಾಖೆಯ ಉಪ ನಿರ್ದೇಶಕ ರಘುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿವಶಂಕರ ಮತ್ತಿತರರಿದ್ದರು.