ಮೌಲ್ಯಯುತ ಆದರ್ಶಗಳನ್ನು ಒಳಗೊಂಡಿರುವ ಭಾರತ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅಪಾರ ಹಾಗೂ ಅವೀಸ್ಮರಣೀಯವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೌಲ್ಯಯುತ ಆದರ್ಶಗಳನ್ನು ಒಳಗೊಂಡಿರುವ ಭಾರತ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅಪಾರ ಹಾಗೂ ಅವೀಸ್ಮರಣೀಯವಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಮಾಜದ ಎಲ್ಲಾ ವರ್ಗಗಳಿಗೂ ಸಮಾನತೆ ಕಲ್ಪಿಸುವ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಲಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿಧಾನ ಹೊಂದಿದ ಸಾರ್ವಭೌಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಒಂದು ರಾಷ್ಟ್ರವಾಗಿ, ರಾಜ್ಯವಾಗಿ ಮಾದರಿ ಜಿಲ್ಲೆಯಾಗಿ ರೂಪುಗೊಳ್ಳಲು ಸಂವಿಧಾನದ ಉತ್ಕ್ರುಷ್ಟ ಮೌಲ್ಯಗಳೇ ಕಾರಣವಾಗಿವೆ. ಎಲ್ಲಾ ಜನರಿಗೂ ಸಾಮಾಜಿಕ, ಅರ್ಥಿಕ, ರಾಜಕೀಯ ನ್ಯಾಯವನ್ನು ದೊರಕಿಸಿಕೊಡುವುದೇ ಸಂವಿಧಾನದ ಮುಖ್ಯ ಗುರಿಯಾಗಿದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ಜನರ ಅರ್ಥಿಕ ಸದೃಢತೆ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಎಲ್ಲರನ್ನು ಒಳಗೊಂಡ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಂಕಣಬದ್ಧವಾಗಿದೆ. ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು ಆಗಿದ್ದು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ಹೇರಳ ಅರಣ್ಯ, ವನ್ಯಜೀವಿ ಸಂಪತ್ತು ಹೊಂದಿದೆ. ಜಾನಪದ ಮಹಾಕಾವ್ಯಗಳನ್ನು ಇಡೀ ಜಗತ್ತಿಗೆ ಕೊಟ್ಟ ಜಿಲ್ಲೆ ನಮ್ಮದಾಗಿದೆ. ರಾಜ್ಯದಲ್ಲಿಯೇ ಹೆಚ್ಚು ಗುಣಮಟ್ಟದ ಶುದ್ಧ ಗಾಳಿ ಮತ್ತು ಅತೀ ಹೆಚ್ಚು ಹುಲಿಗಳನ್ನು ಹೊಂದಿರುವುದು ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ ಎಂದರು.
ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಜೆ.ಜೆ.ಎಂ. ಯೋಜನೆಯ ೧೨೨೬ ಕಾಮಗಾರಿಗಳಲ್ಲಿ ಈಗಾಗಲೇ ೧೦೨೬ ಪೂರ್ಣಗೊಂಡಿದ್ದು, ಉಳಿದ ೨೦೦ ಕಾಮಗಾರಿಗಳನ್ನು ಪ್ರಸ್ತುತ ವರ್ಷಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ದಾಸ್ತಾನು ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.ಎಂ.ಎಸ್.ಐ.ಎಲ್ ಅಧ್ಯಕ್ಷರಾದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.