ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ಸಿನಲ್ಲಿದ್ದ ಪುರೋಹಿತಶಾಹಿ ವರ್ಗವೇ ಕಾರಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Apr 16 2024, 01:00 AM IST

ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ಸಿನಲ್ಲಿದ್ದ ಪುರೋಹಿತಶಾಹಿ ವರ್ಗವೇ ಕಾರಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಅಪಾರವಾಗಿದೆ. ಜೊತೆಗೆ ಅಂಬೇಡ್ಕರ್ ಅವರ ಕೊಡುಗೆಯೂ ಸಾಕಷ್ಟು ಇದೆ. ಅಂಬೇಡ್ಕರ್ ಚುನಾವಣೆಲ್ಲಿ ಸ್ಪರ್ಧಿಸಿದ್ದ ವೇಳೆ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದರು ಎಂದು ಪದೇ ಪದೇ ಬಿಜೆಪಿಗರು ಹೇಳುತ್ತಲೇ ಇದ್ದಾರೆ. ಆದರೆ, ಅದರ ಮೂಲ ಹುಡುಕಿದಾಗ ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಯಿ ವರ್ಗವೇ ಬಾಬಾ ಸಾಹೇಬರನ್ನು ಸೋಲಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ನ್ನು ಸೋಲಿಸಿದವರು ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಹಿ ವರ್ಗವೇ ಹೊರತು ಮೂಲ ಕಾಂಗ್ರೆಸ್ಸಿಗರಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಅಪಾರವಾಗಿದೆ. ಜೊತೆಗೆ ಅಂಬೇಡ್ಕರ್ ಅವರ ಕೊಡುಗೆಯೂ ಸಾಕಷ್ಟು ಇದೆ. ಅಂಬೇಡ್ಕರ್ ಚುನಾವಣೆಲ್ಲಿ ಸ್ಪರ್ಧಿಸಿದ್ದ ವೇಳೆ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದರು ಎಂದು ಪದೇ ಪದೇ ಬಿಜೆಪಿಗರು ಹೇಳುತ್ತಲೇ ಇದ್ದಾರೆ. ಆದರೆ, ಅದರ ಮೂಲ ಹುಡುಕಿದಾಗ ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಯಿ ವರ್ಗವೇ ಬಾಬಾ ಸಾಹೇಬರನ್ನು ಸೋಲಿಸಿದೆ ಎಂದು ಸ್ಪಷ್ಟಪಡಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಹೋರಾಟಗಾರರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೆಸರಿನಲ್ಲೇ ಚಳವಳಿ ಮಾಡಿದ್ದರು. ಸ್ವಾತಂತ್ರ್ಯಾ ನಂತರದ ಕಾಲಘಟ್ಟದಲ್ಲಿ ಎದುರಾದ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬೇಡ್ಕರ್‌ರನ್ನು ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಹಿ ವರ್ಗದವರು ಸೋಲಿಸಿದರು. ನಂತರ ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಈ ವರ್ಗ ಅಸ್ತಿತ್ವಕ್ಕೆ ತಂದರು ಎಂದು ವಿವರಿಸಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಹಾಳುವ ಕೆಲಸ ಮಾಡಲಿಲ್ಲ. ಬದಲಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಅಭಿವೃದ್ಧಿ ಕಾರ್‍ಯ ಮಾಡಿದೆ. ಪ್ರಧಾನಿಯಾಗಿದ್ದ ದಿಟ್ಟ ಮಹಿಳೆ ಇಂದಿರಾಗಾಂಧಿ ಆಡಳಿತವನ್ನು ಸಹಿಸದೆ ಸಿಖ್ ಆಪರೇಷನ್ ಬ್ಲೂಸ್ಟಾರ್ ಹತ್ಯೆ ಮಾಡಿದರು. ನಂತರ ಅನಿವಾರ್‍ಯವಾಗಿ ರಾಜೀವ್‌ ಗಾಂಧಿಯವರು ಆಡಳಿತ ಹಿಡಿದು ತಂತ್ರಜ್ಞಾನ ಕ್ರಾಂತಿಯನ್ನೇ ಮಾಡಿದರು. ಇಂದು ದೇಶದ ಎಲ್ಲ ನಾಗರೀಕರೂ ಕೈಯಲ್ಲೇ ಜಗತ್ತನ್ನು ನೋಡುವ ಸ್ಥಿತಿಗೆ ಬಂದಿದೆ ಅಂದರೆ ಅದಕ್ಕೆ ಅಂದಿನ ರಾಜೀವ್‌ಗಾಂಧಿಯವರ ಯೋಜನೆಯೇ ಕಾರಣ ಎಂದರು.

ಏಕೆ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ:

ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಆಸ್ತಿ ಬರೆಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ, ಅವರೇ ಮುಖ್ಯಮಂತ್ರಿಯಾಗಿದವರು ಒಂದು ವೇಳೆ ಶಿವಕುಮಾರ್ ಅವರು ಹೆಣ್ಣು ಮಕ್ಕಳನ್ನು ಅಪಹರಿಸಿದ್ದರೆ ಏಕೆ ಕಾನೂನು ಕ್ರಮಕ್ಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು. ಕಾನೂನು ಕ್ರಮ ಕೈಗೊಳ್ಳದೆ ಇಡೀ ಮಹಿಳಾ ವರ್ಗಕ್ಕೆ ಅಪಮಾನ ಮಾಡಿದ್ದೀರಿ ಎಂದು ಕಿಡಿಕಾರಿದರು.

ರಾಜ್ಯ ಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ನರೇದ್ರ ಮೋದಿ ಸರ್ಕಾರ ಶೋಷಿತ ವರ್ಗ ಮತ್ತು ತಳ ಸಮುದಾಯದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ. ಶೇ.10ರಷ್ಟಿರುವ ಶ್ರೀಮಂತ ವರ್ಗದ ಆಸ್ತಿ ವೃದ್ಧಿಯಾಗಿದೆಯೇ ಹೊರತು ಶೋಷಿತ ವರ್ಗದವರ ಆದಾಯ 10 ವರ್ಷಗಳಿಗಿಂತ ಕೆಳಗಿದೆ ಎಂದು ಆರೋಪಿಸಿದರು.

ದೇಶದ 2.06 ಲಕ್ಷ ಗ್ರಾಪಂಗಳಿಗೆ ಇಂಟರ್‌ನೆಟ್ ಸೇವೆ ಒದಗಿಸುತ್ತೇವೆ ಎಂದು ಹೇಳಿದ್ದ ನರೇಂದ್ರ ಮೋದಿ ಸರ್ಕಾರ ಕೇವಲ 6322 ಗ್ರಾಪಂಗಳಿಗೆ ಮಾತ್ರ ಇಂಟರ್‌ನೆಟ್ ಸೇವೆ ನೀಡಿದೆ. ಇದು ಇವರ ಸಾಧನೆಯೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಶೇ.72ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ 65 ವರ್ಷ ಆಡಳಿತ ನಡೆಸಿದ ವಿವಿಧ ಪಕ್ಷಗಳು 55 ಲಕ್ಷ ಕೋಟಿ ಸಾಲ ಮಾಡಿದ್ದರೆ, ಮೋದಿಯವರು ಅಧಿಕಾರ ಹಿಡಿದ ಕೇವಲ 10 ವರ್ಷಗಳಲ್ಲಿ 1.55 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದು ಎಲ್ಲಿಗೆ ಹೋಯಿತು ಎಂದರು.

ಶಾಲೆ ಕಟ್ಟಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ನೀಡಲಿಲ್ಲ. ಈ ದೇಶದ ಸಾಮಾನ್ಯ ವರ್ಗ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಯಾವ ಯೋಜನೆಯನ್ನೂ ರೂಪಿಸಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡುತ್ತಿದ್ದಾರೆ. ಆದರೆ, ಅವರ ಪ್ರಣಾಳಿಕೆಯಲ್ಲಿ ಶೋಷಿತ ವರ್ಗದವರು, ರೈತರಿಗೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಲ್. ಪದ್ಮನಾಭ, ವಕ್ತಾರ ಟಿ.ಎಸ್. ಸತ್ಯಾನಂದ ಇದ್ದರು.