ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಜಗತ್ತಿನ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಾದರೆ ದೇವಸ್ಥಾನಗಳ ಮುಂದೆ ಸರತಿ ಸಾಲು ನಿಲ್ಲುವುದರ ಬದಲಾಗಿ ಗ್ರಂಥಾಲಯಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಬೇಕು ಎಂದು ಹೇಳಿದ್ದರು. ಗ್ರಂಥಾಲಯಗಳ ಡಿಜಿಟಲಿಕರಣ ನೋಡಿದಾಗ ಅಂಬೇಡ್ಕರ್ ಕಂಡ ಕನಸು ನನಸಾಗುತ್ತಿದೆ ಎಂದು ಚಿನ್ಮಯಗಿರಿಯ ಮಹಾಂತ ಮಠದ ವೀರಮಹಾಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.ಅಫಜಲ್ಪುರ ತಾಲೂಕಿನ ಚವಡಾಪುರ ಗ್ರಾಮದಲ್ಲಿ ನನ್ನ ಜನ ನನ್ನ ಋಣ ಅಭಿಯಾನದಡಿ ಸಾರ್ವಜನಿಕರ ದೇಣಿಗೆ ಹಣದಲ್ಲಿ ನಿರ್ಮಾಣವಾದ ಸರ್ಕಾರಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಗಳು ಮತ್ತು ಧಾರ್ಮಿಕ ಕ್ಷೇತ್ರಗಳು ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ತಾಣಗಳಾಗಿವೆ. ಆದರೆ ಬದುಕು ರೂಪಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರು ಓದಲೇಬೇಕು, ಕಷ್ಟ ಪಟ್ಟು ದುಡಿಯಲೇಬೇಕು ಹೀಗಾಗಿ ನಮ್ಮ ದೇಶದ ಭವಿಷ್ಯವಾಗಿರುವ ಮಕ್ಕಳು ಓದಿಕೊಳ್ಳಲು ಡಿಜಿಟಲ್ ಗ್ರಂಥಾಲಯ ನಿರ್ಮಾಣವಾಗಿದ್ದು ಖುಷಿಯ ಸಂಗತಿ.
ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಸಮರ್ಪಕ ಮೂಲಭೂತ ಸೌಕರ್ಯಗಳು ಸಿಗುವಂತಾಗಿ ಗ್ರಾಮೀಣ ಭಾಗದ ಮಕ್ಕಳು ಕೂಡ ಐಎಎಸ್, ಐಪಿಎಸ್‌ಗಳಂತ ದೊಡ್ಡ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಶುಭ ಹಾರೈಸಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ ಅಫಜಲ್ಪುರ ತಾ.ಪಂ ಇಒ ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನನ ಬಾಳೆ ಅವರು ನನ್ನ ಜನ ನನ್ನ ಋಣ ಎನ್ನುವ ವಿನೂತನ ಅಭಿಯಾನ ಆರಂಭಿಸಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಗ್ರಂಥಾಲಗಳಿಗೆ ಡಿಜಿಟಲ್ ರೂಪ ಕೊಡುವ ಮಹತ್ಕಾರ್ಯಕ್ಕೆ ಮುಂದಾಗಿ ಸಫಲರಾಗಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದ ಅವರು ಡಿಜಟಿಲ್ ಗ್ರಂಥಾಲಯದ ಲಾಭವನ್ನು ವಿದ್ಯಾರ್ಥಿಗಳು, ಓದುಗರು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದರು.ಐಎಎಸ್ ಅಧಿಕಾರಿ ಗಜಾನನ ಬಾಳೆ ಮಾತನಾಡಿ ನಾವು ಓದಿ ಉನ್ನತ ಹುದ್ದೆ ಹಿಡಿದು ನಮ್ಮ ಕುಟುಂಬ, ನಮ್ಮ ಬಂಧು ಬಳಗ ಎಂದುಕೊಂಡರೆ ದೇಶದ ಜವಾಬ್ದಾರಿಗಳಿಂದ ಜಾರಿಕೊಂಡಂತಾಗುತ್ತದೆ. ಗ್ರಾಮೀಣ ಭಾಗದ ನಮ್ಮ ಜನ ಇನ್ನೂ ಸಾಕಷ್ಟು ಅಂಧಶೃದ್ದೆ, ಅನಕ್ಷರತೆ, ಬಡತನದಿಂದ ಬಳಲುತ್ತಿದ್ದಾರೆ. ಅವರನ್ನು ಮೇಲೆತ್ತುವುದಕ್ಕೆ ಶಿಕ್ಷಣ ಬಿಟ್ಟರೆ ಬೇರಾವುದೇ ಶಾಶ್ವತ ಪರಿಹಾರ ಮಾರ್ಗವಿಲ್ಲ ಹೀಗಾಗಿ ಶಿಕ್ಷಣಕ್ಕೆ ಮತ್ತು ಓದಿಗೆ ಉತ್ತೇಜನ ನೀಡುವ ಸಲುವಾಗಿ ನನ್ನ ಜನ ನನ್ನ ಋಣ ಅಭಿಯಾನ ಆರಂಭಿಸಿದ್ದೇವು. ಆರಂಭದಲ್ಲಿ ಜನ ಸಹಕರಿಸುತ್ತಾರೋ ಇಲ್ಲವೋ ಎನ್ನುವ ಆತಂಕವಿತ್ತು. ಆದರೆ ತಾಲೂಕಿನ ಜನರ ಅಭೂತಪೂರ್ವ ಸಹಕಾರದಿಂದ ಡಿಜಿಟಲ್ ಗ್ರಂಥಾಲಯಗಳ ನಿರ್ಮಾಣವಾಗಿದ್ದು ನಿಜಕ್ಕೂ ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್, ತಾ.ಪಂ ಎಡಿ ರಮೇಶ ಪಾಟೀಲ್, ಅಧಿಕಾರಿಗಳಾದ ಈರಣ್ಣ ಕವಲಗಿ, ಬಾಬುರಾವ ಜ್ಯೋತಿ, ಗ್ರಾ.ಪಂ ಅಧ್ಯಕ್ಷೆ ಶಿವಲಿಲಾ ಆನಂದ, ಪಿಡಿಒ ಪಿಡಿಒ ಈರಣ್ಣ ಕಣ್ಣಿ, ಮಲಕಯ್ಯ ಹಿರೇಮಠ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.