ಅಂಬೇಡ್ಕರ್ ಜೀವನ ಸಾಧನೆಯೇ ಒಂದು ದೊಡ್ಡ ಮೈಲಿಗಲ್ಲು: ಎಸ್.ಎಲ್. ಚೆನ್ನಬಸವಣ್ಣ

| Published : Dec 08 2024, 01:17 AM IST

ಅಂಬೇಡ್ಕರ್ ಜೀವನ ಸಾಧನೆಯೇ ಒಂದು ದೊಡ್ಡ ಮೈಲಿಗಲ್ಲು: ಎಸ್.ಎಲ್. ಚೆನ್ನಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಬಹುಜನರು, ತಳ ಸಮುದಾಯವನ್ನು ಶಿಕ್ಷಣದ ಮೂಲಕವೇ ಮೇಲೆತ್ತುವ ಕೆಲಸ ಮಾಡಿದರು. ಇಂತಹ ಕೆಲಸ ಯಾವ ದೇಶದಲ್ಲೂ ಆಗಿಲ್ಲ. ಬೇರೆ ದೇಶಗಳಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಿಂಸಾತ್ಮಕ ಕೃತ್ಯವನ್ನು ಅನುಸರಿಸಿದ್ದರಿಂದ ರಕ್ತ ಕ್ರಾಂತಿಗಳೇ ನಡೆದಿವೆ. ಹಿಂಸೆಯ ಮೂಲಕವೇ ಹಕ್ಕುಗಳನ್ನು ಪಡೆಯುವ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಜೀವನ ಸಾಧನೆಯೇ ಒಂದು ದೊಡ್ಡ ಮೈಲಿಗಲ್ಲು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) ಉಪ ನಿರ್ದೇಶಕ ಎಸ್.ಎಲ್. ಚೆನ್ನಬಸವಣ್ಣ ತಿಳಿಸಿದರು.

ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಆಯೋಜಿಸಿದ್ದ ಬೋಧಿಸತ್ವ ಬಾಬಾ ಸಾಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಬಹುಜನರು, ತಳ ಸಮುದಾಯವನ್ನು ಶಿಕ್ಷಣದ ಮೂಲಕವೇ ಮೇಲೆತ್ತುವ ಕೆಲಸ ಮಾಡಿದರು. ಇಂತಹ ಕೆಲಸ ಯಾವ ದೇಶದಲ್ಲೂ ಆಗಿಲ್ಲ. ಬೇರೆ ದೇಶಗಳಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಿಂಸಾತ್ಮಕ ಕೃತ್ಯವನ್ನು ಅನುಸರಿಸಿದ್ದರಿಂದ ರಕ್ತ ಕ್ರಾಂತಿಗಳೇ ನಡೆದಿವೆ. ಹಿಂಸೆಯ ಮೂಲಕವೇ ಹಕ್ಕುಗಳನ್ನು ಪಡೆಯುವ ಕೆಲಸವಾಗಿದೆ. ಆದರೆ, ಭಾರತದಲ್ಲಿ ಬಾಬಾ ಸಾಹೇಬರು ಇದಕ್ಕೆ ಅವಕಾಶ ನೀಡದೆ, ಶಾಂತಿಯುತ ಹೋರಾಟದ ಮೂಲಕವೇ ಜನರಿಗೆ ಸಮಾನತೆಯನ್ನು ತಂದುಕೊಡುವ ಕೆಲಸ ಮಾಡಿದರು ಎಂದರು.

ಯಾವುದೇ ಭಾಷೆ, ಧರ್ಮ, ಸಂಸ್ಕೃತಿಯನ್ನು ಪಾಲನೆ ಮಾಡಲು ಸಂವಿಧಾನವೇ ಮೂಲಕಾರಣ. ಆದ್ದರಿಂದ ಈ ದೇಶದ ನಿಜವಾದ ಧರ್ಮ ಗ್ರಂಥ ಸಂವಿಧಾನವಾಗಿದೆ. ಇಂದಿನ ಪೀಳಿಗೆಗೆ ಬಾಬಾ ಸಾಹೇಬರನ್ನು ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ ಮಾತನಾಡಿ, ಅನೇಕ ಸಂಸ್ಕೃತಿ, ಧಾರ್ಮಿಕ ಕೇಂದ್ರಗಳ ಭಕ್ತಿ ಭಾವದ ಸೆಲೆಯಾಗಿ ಹರಿಯುವ ಗಂಗಾ ನದಿಯಂತೆ ಬಾಬಾಸಾಹೇಬರು ಈ ದೇಶದ ಕೋಟ್ಯಂತರ ಶೋಷಿತ ಜನರ ಧ್ವನಿಯಾಗಿ, ಅವರ ಬದುಕಿನ ದಾರಿ ದೀಪವಾಗಿದ್ದಾರೆ ಎಂದರು.

ಸಾವಿರಾರು ಕಿಲೋ ಮೀಟರ್ ದೂರ ಹರಿಯುವ ಗಂಗಾ ನದಿಯನ್ನು ಪೂಜ್ಯನೀಯ ಭಾವದಿಂದ ಗೌರವಿಸುತ್ತಾರೆ. ಬಾಬಾ ಸಾಹೇಬರು ಕೂಡ ಶೋಷಿತರ ನಡುವೆ ಇಂತಹದ್ದೇ ಸ್ಥಿತಿಯನ್ನು ತಲುಪಿದ್ದಾರೆ. ಹೀಗಾಗಿ ಬಾಬಾಸಾಹೇಬರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಸ್ವೀಕರಿಸಿದ್ದಾಗ ಮಾತ್ರ ನಮ್ಮ ನಡುವೆ ಉಳಿಯುತ್ತಾರೆ ಎಂದರು.

ಇದೇ ವೇಳೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪ್ರೊ.ಸಿದ್ದಣ್ಣ ಲಂಗೋಟಿ, ಸಮಿತಿಯ ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಎಂ. ಸಾವಕಯ್ಯ, ಆರ್. ನಟರಾಜ್, ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಕ್ರಾಂತಿರಾಜ್ ಒಡೆಯರ್, ಪುಟ್ಟಸ್ವಾಮಿ, ದಯಾನಂದಮೂರ್ತಿ, ಕೆ. ಮಹಾದೇವಯ್ಯ, ಡಾ. ಸತ್ತಿಗೆಹುಂಡಿ ಮಂಜು, ಶಶಿಕಲಾ, ಮಾ. ನಾಗಯ್ಯ, ಪ್ರೇಮಲತಾ, ಬಿ. ಗಾಯತ್ರಿದೇವಿ, ರಾಜಮ್ಮ, ಪುಟ್ಟಮಾದಯ್ಯ, ಡಾ.ಎಸ್. ಜಯರಾಜು, ಎಚ್. ವಾಸು, ಪಿ. ಮರಿಸ್ವಾಮಿ, ಮಹದೇವಸ್ವಾಮಿ, ಕೆ. ಸಿದ್ದರಾಜು, ಎಸ್.ಆರ್. ಪ್ರಶಾಂತ್, ಸಣ್ಣಯ್ಯ ಲಕ್ಕೂರು, ರೂಪೇಶ್, ವಿಜಯ್ ಕುಮಾರ್, ಸಚಿನ್ ಮೊದಲಾದವರು ಇದ್ದರು.